ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಹಿರಿದು

admin Avatar

ಗದಗ: ಜಿಲ್ಲೆಯಲ್ಲಿ  ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದಾಗಿದೆ ಎಂದು ನಿವೃತ್ತ ಪೊಲೀಸ ವರಿಷ್ಠಾಧಿಕಾರಿ ಟಿ. ಫೈಜುದ್ದೀನ್ ಹೇಳಿದರು.
ಗದಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಂಗಳವಾರ ಜಿಲ್ಲಾ ಸಶಸ್ತ್ರ ಪೊಲೀಸ್ ಘಟಕ ಮಲ್ಲಸಮುದ್ರ-ಗದಗ ಮೈದಾನದಲ್ಲಿ  ಪೊಲೀಸ್ ಧ್ವಜ ದಿನಾಚರಣೆ’  ನಿಮಿತ್ತ ಆಯೋಜಿಸಿದ್ದ ನಿವೃತ್ತರ ಸೇವಾ ಸಂಸ್ಮರಣೆ ಮತ್ತು ಗೌರವ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಲಾಖೆಯಲ್ಲಿ ಪ್ರತಿ ದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಎಲ್ಲ ನೌಕರರು  ಮಾನಸಿಕ ಹಾಗೂ ದೈಹಿಕ ಸದೃಢವಾಗಿರುವುದು ಅವಶ್ಯಕವಾಗಿದೆ. ಅವರು ತಮ್ಮ ಸೇವಾ ನಿರತ ದಿನಗಳನ್ನು ಸ್ಮರಿಸಿಕೊಳ್ಳುತ್ತಾ ಪೊಲೀಸ ಇಲಾಖೆ ಹಾಗೂ ಮೇಲಾಧಿಕಾರಿಗಳಿಗೆ ಇನ್ನೂ ಹೆಚ್ಚಿನ ಗೌರವ ತರುವ ಕಾರ್ಯ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾತನಾಡಿ,  ಹಗಲು-ರಾತ್ರಿ  ಎನ್ನದೇ  ಕಾನೂನು ಸುವ್ಯವಸ್ಥೆ ಹಾಗೂ ಶಾಂತತೆ ಕಾಪಾಡಲು ಪೊಲೀಸ್ ಸಿಬ್ಬಂದಿಯವರು ಸದಾ ಕಾರ್ಯನಿರತರಾಗಿರುತ್ತಾರೆ.  1965 ರಿಂದ  ಪೆÇಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದ್ದು, ಪ್ರಸಕ್ತ ವರ್ಷವೂ ಎಪ್ರಿಲ್ 02 ರಂದು ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಈ ಸಮಯದಲ್ಲಿ ಸ್ಮರಿಸಿಕೊಳ್ಳಲು  ಹಾಗೂ ನಿವೃತ್ತಿ ನಂತರ ಅವರಿಗೆ ಉತ್ತೇಜನ ನೀಡಲು  ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. 
ಪ್ರತಿ ವರ್ಷ ಪೊಲೀಸ್ ಧ್ವಜ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಶೇಕಡಾ 50 ರಷ್ಟು ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಮತ್ತು ಶೇಕಡಾ 50 ರಷ್ಟು ಹಣವನ್ನು ಕೇಂದ್ರ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಿ ಈ ನಿಧಿಯನ್ನು ಸೇವೆಯಲ್ಲಿರುವ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವೈದ್ಯಕೀಯ ಚಿಕಿತ್ಸಾ ವೆಚ್ಚ ಮಂಜೂರಿಸುವ ಸಲುವಾಗಿ ವಿನಿಯೋಗಿಸಲಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿ ಸಮಿತಿ ಸಭೆ ಕರೆದು ಸದರಿ ಸಭೆಗಳಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯವರ ಕುಂದುಕೊರತೆಗಳನ್ನು ಆಲಿಸಿ, ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯವರು ಕ್ಯಾಂಟೀನ್ ಉಪಯೋಗ ಪಡೆಯುತ್ತಿದ್ದು, ಈ ಸದುಪಯೋಗವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳೂ ಸಹ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಪ್ರಸಕ್ತ ವರ್ಷನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮನಿಧಿಯಿಂದ  39 ಜನ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರಿಗೆ  ರೂ.1,27,950 ವೈದ್ಯಕೀಯ ಧನ ಸಹಾಯ ಪಾವತಿಸಲಾಗಿದೆ ಮತ್ತು  ಮರಣ ಹೊಂದಿದ 22 ಜನ ನಿವೃತ್ತ ಪೊಲೀಸ್ ಅಧಿಕಾರಿಗಳ ಅಂತ್ಯಸಂಸ್ಕಾರಕ್ಕೆ 2,20,000 ರೂ ಧನ ಸಹಾಯ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ತಿಳಿಸಿದರು. 
ಕಾರ್ಯಕ್ರಮದಲ್ಲಿ ಸೇವಾ ನಿವೃತ್ತರಿಗೆ ಗೌರವ ಸಮರ್ಪಣೆ ಮಾಡಲಾಯಿತು.  ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ  ಎಂ.ಬಿ. ಸಂಕದ ,ಡಿಎಸ್ಪಿ ಡಿ.ಬಿ.ಇನಾಮದಾರ, ಸೇರಿದಂತೆ ಸಿಬ್ಬಂದಿ, ಗಣ್ಯರು ಇದ್ದರು.
ಡಿ ಎಸ್ ಪಿ ಡಿ.ಎಸ್ ಧನಗರ ಅವರು ಸ್ವಾಗತಿಸಿದರು.  ಡಿಎಸ್‍ಪಿ  ಪ್ರಭುಗೌಡ ಕಿರೆದಳ್ಳಿ ವಂದಿಸಿದರು. ಎಂ ಟಿ ಭಟ್ ನಿರೂಪಿಸಿದರು

Leave a Reply

Your email address will not be published. Required fields are marked *