ಕಾಂಗ್ರೆಸ್ ‌40 ಸ್ಥಾನವನ್ನೂ ಗೆಲ್ಲುವುದಿಲ್ಲ: ಬಸವರಾಜ ಬೊಮ್ಮಾಯಿ

admin Avatar

ಗದಗ: ರಾಜ್ಯ ಸರ್ಕಾರ ರೈತರ ಕಿಸಾನ್ ಸನ್ಮಾನ್, ರೈತ ವಿದ್ಯಾನಿಧಿ, ರೈತ ಶಕ್ತಿ ಯೋಜನೆ ಸ್ಥಗಿತ ಮಾಡಿದ್ದಾರೆ.. ಬರ ಪರಿಸ್ಥಿತಿಯಲ್ಲಿ ಒಂದು ರೂಪಾಯಿಯನ್ನೂ ನೀಡಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯ ಆಳುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಯಳವತ್ತಿ, ಮಾಗಡಿ, ಕಡಕೋಳ, ಬನ್ನಿಕೊಪ್ಪ, ಮಾಚೇನಹಳ್ಳಿ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಕಾಂಗ್ರೆಸ್ ಜನರಿಗೆ ಹೋಲ್ ಸೇಲ್ ಮೋಸ ಮಾಡಲು ನಿಂತಿದೆ.
ಹೆಣ್ಣುಮಕ್ಕಳಿಗೆ ಒಂದು ಲಕ್ಷ ರೂಪಾಯಿ ಕೊಡುತ್ತೇವೆ ಅಂತಾ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಪ್ರಣಾಳಿಕೆ ಮಾಡಲಿ ಆದರೆ, ಗ್ಯಾರಂಟಿ ಕಾರ್ಡ್ ಕೊಟ್ಟು ಸುಳ್ಳು ಢೋಂಗಿ ಮಾಡುವುದಕ್ಕೆ ಶುರುಮಾಡಿದ್ದಾರೆ. ಇದು ಕಾನೂನು ವಿರುದ್ಧ ಎಂದು ಗ್ಯಾರಂಟಿ ಕಾರ್ಡ್ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗ್ಯಾರೆಂಟಿ ‌ಕಾರ್ಡ್ ಗಳಿಗೆ ಸಹಿ ಮಾಡಿ ಕೊಡುತ್ತಿದ್ದಾರೆ. ಅವರೇನು ಈ ದೇಶದ ಪ್ರಧಾನಿನಾ, ರಾಷ್ಟ್ರಪತಿನಾ, ಅವರು ಕೊಡುವ ಗ್ಯಾರೆಂಟಿಗೆ ಯಾವುದೇ ಮರ್ಯಾದೆ ಇಲ್ಲ. ಅವರು ಕೊಡುವ ಗ್ಯಾರೆಂಟಿ ಕಾರ್ಡ್ ಗಳನ್ನು ಹರಿದು ಹಾಕಿ ಎಂದು ಹೇಳಿದರು.
ಲೋಕಸಭೆಯಲ್ಲಿ 543 ಸ್ಥಾನಗಳಿದ್ದು, ಬಹಮತಕ್ಕೆ 272 ಸ್ಥಾನಬೇಕು. ಕಾಂಗ್ರೆಸ್ ಸ್ಪರ್ಧೆ ಮಾಡಿರುವುದೇ 230 ಸ್ಥಾನಗಳಿಗೆ. ಹೀಗಾಗಿ ಕಾಂಗ್ರೆಸ್ ಬಹುಮತ ಬರುವುದಿಲ್ಲ. ಕಾಂಗ್ರೆಸ್ ಗೆ 40 ಕ್ಕಿಂತ ಹೆಚ್ಚು ಸ್ಥಾನ ಸಿಗುವುದಿಲ್ಲ. ರೈತರಿಗೆ, ಬಡವರಿಗೆ, ದಲಿತರಿಗೆ ಅನ್ಯಾಯ ಮಾಡಿರುವ ಕಾಂಗ್ರೆಸ್ ರಾಜ್ಯವನ್ನು ಆಳುವ ನೈತಿಕತೆ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಋಣ ತೀರಿಸುವ ಸಮಯ
ನಾನು ಹಲವಾರು ಪ್ರಧಾನ ಮಂತ್ರಿಗಳನ್ನು ನೋಡಿದ್ದೇನೆ. ನರೇಂದ್ರ ಮೋದಿಯವರು ದಿನಕ್ಕೆ 18 ಗಂಟೆ‌‌ ಕೆಲಸ ಮಾಡುತ್ತಾರೆ. ಅವರು ಸಾಮಾನ್ಯ ಬಡ ಕುಟುಂಬದಿಂದ ಬಂದವರು. ಅವರಿಗೆ ಬಡತನ ಅಂದರೆ ಏನು ಅಂತ ಗೊತ್ತಿದೆ. ಅವರು ದೇಶದ 25 ಕೋಟಿ ಜನರನ್ನು ಬಡತನದಿಂದ ಮೇಲೆ ತಂದಿದ್ದಾರೆ. ಮೋದಿಯವರು ಅಸಾಧ್ಯ ಎನ್ನುವುದನ್ನು ಸಾಧ್ಹ ಮಾಡಿದವರು ನರೇಂದ್ರ‌ಮೋದಿಯವರು, ಅವರು ಭಯೋತ್ಪಾನೆಯನ್ನು ಸಂಪೂರ್ಣ ನಿರ್ಣಾಮ‌ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೊವಿಡ್ ಸಂದರ್ಭದಲ್ಲಿ ದೇಶದ 130 ಕೋಟಿ ಜನರಿಗೆ ಉಚಿತ ಲಸಿಕೆ ಕೊಟ್ಟು ಪ್ರಾಣ ಉಳಿಸಿದ್ದಾರೆ. ಅಮೇರಿಕಾ ದೇಶದಲ್ಲಿ ಒಂದು ಲಸಿಗೆ 30 ಸಾವಿರ ರೂಪಾಯಿ ಇದೆ. ಮೋದಿಯವರು ಎಲ್ಲರಿಗೂ‌ ಉಚಿತವಾಗಿ ಮೂರು ಬಾರಿ ಲಸಿಕೆ ಕೊಟ್ಟಿದ್ದಾರೆ. ಪ್ರಾಣ ಉಳಿಸಿದ ಅವರ ಋಣವನ್ನು ಬಿಜೆಪಿಗೆ ಮತ ಹಾಕುವ ಮೂಲಕ ತೀರಿಸಬೇಕು ಎಂದರು.
ನಾನು ಈ ಕ್ಷೇತ್ರದ ಸಂಸದನಾಗಿ ಆಯ್ಕೆಯಾಗಿ ನನ್ನ ಮೂವತೈದು ವರ್ಷದ ರಾಜಕೀಯ ಅನುಭವವನ್ನು ಈ‌ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡುತ್ತೇನೆ. ಈ ಭಾಗಕ್ಕೆ ಅನುಕೂಲವಾಗುವ ನೀರಾವರಿ ಯೋಜನೆ, ಕೈಗಾರಿಕೆಗಳನ್ನು ತರುವ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಜನರ ಧ್ವನಿಯಾಗಿ ಸಂಸತ್ತಿನಲ್ಲಿ ಸಿಂಹ ಘರ್ಜನೆ ಮಾಡುತ್ತೇನೆ ಎಂದು ಹೇಳಿದರು.
ಚುನಾವಣಾ ಪ್ರಚಾರದಲ್ಲಿ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಸ್ಥಳೀಯ ನಾಯಕರ ಹಾಜರಿದ್ದರು.

Leave a Reply

Your email address will not be published. Required fields are marked *