ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

admin Avatar

ಗದಗನಲ್ಲಿ ನಾಲ್ವರ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಲಿ: ಬಸವರಾಜ ಬೊಮ್ಮಾಯಿ ಆಗ್ರಹ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ಗ್ಯಾರೆಂಟಿಗಳ ಜೊತೆ ಕೊಲೆ ಗ್ಯಾರೆಂಟಿಯೂ ಸೇರ್ಪಡೆಯಾಗಿದೆ : ಬಸವರಾಜ ಬೊಮ್ಮಾಯಿ

ಗದಗ: ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರು, ಸಮಾಜ ಘಾತುಕರೇ ಪ್ರಥಮ ಪ್ರಜೆಗಳಾಗಿದ್ದು, ಅವರಿಗೆ ರಾಜ ಮರ್ಯಾದೆ ಸಿಗುತ್ತಿದೆ. ಗದಗನಲ್ಲಿ ನಾಲ್ವರನ್ನು ಹತ್ಯೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಅವರು ಗದಗ ನಗರದಲ್ಲಿ ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಸೇರಿ ಅವರ ಕುಟುಂಬದ ನಾಲ್ವರ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ಇಂದು ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಘಟನೆಯಿಂದ ನಾವೆಲ್ಲ ಅತ್ಯಂತ ಆಘಾತದಲ್ಲಿದ್ದೆವೆ. ಬಾಕಳೆ ಅವರ ಕುಟುಂಬಕ್ಕೆ ಪೂರ್ಣ ದಿಗ್ಬ್ರಮೆ ಆಗಿದೆ. ಈ ಘಟನೆಯನ್ನು ಯಾರೂ ಊಹೆ ಮಾಡಲು ಸಾಧ್ಯವಿಲ್ಲ. ದುಷ್ಕರ್ಮಿಗಳಿಗೆ ಯಾವುದೇ ಭಯ ಇಲ್ಲ. ಸರ್ಕಾರ, ಪೊಲಿಸರ ಭಯ ಇಲ್ಲ. ಯಾವ ಹಂತಕ್ಕೆ ಈ ವ್ಯವಸ್ಥೆ ತಲುಪಿದೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಕೊಲೆಯಾಗಿದೆ. ವಿದ್ಯಾರ್ಥಿನಿ ಕೊಲೆ ನಡೆದ ದಿನವೇ ರಾತ್ರಿ ಗದಗನಲ್ಲಿ ದುಷ್ಕರ್ಮಿಗಳು ಅಷ್ಟೊಂದು ಧೈರ್ಯದಿಂದ ಕೊಲೆ ಮಾಡುತ್ತಾರೆ ಎಂದರೆ ಅವರಿಗೆ ಈ ಸರ್ಕಾರದಲ್ಲಿ ಮೊದಲು ರಕ್ಷಣೆ ಸಿಗುತ್ರಿದೆ. ಕೊಲೆಗಡುಕರು ಹಂತಕರು ರಾಜ್ಯದ ಮೊದಲ ಪ್ರಜೆಗಳಾಗಿದ್ದಾರೆ. ರಾಜಕಿಯ ಬೆಂಬಲ ಅವರಿಗೆ ಇದೆ. ನೇರವಾಗಿ ಆಡಳಿತದ ವೈಫಲ್ಯದ ಜೊತೆಗೆ ಮತ ಬ್ಯಾಂಕ್ ತುಷ್ಟೀಕರಣದಿಂದ ಈ ರೀತಿಯ ಘಟನೆಗಳು ನಡೆಯುತ್ತಿವೆ. ಸಾಮೂಹಿಕ ಹತ್ಯೆಗಳು ರಾಜಾರೋಷವಾಗಿ ನಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಕಾನೂನು ಕೊಲೆಗಡುಕರ ಸೇವಕ
ಈ ಸರ್ಕಾರ ಬಂದ ಮೇಲೆ ಸಮಾಜ ಘಾತುಕರು ದರೋಡೆಕೊರರು ಸಮಾಜದ ಒಳಗೆ ಬಂದಿದ್ದಾರೆ.
24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಬೇಕು.
ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ವಯಕ್ತಿಕ ಘಟನೆ ಅಂತ ಎಷ್ಡು ಸರಳವಾಗಿ ಹೇಳುತ್ತಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಪರಾಧಿಗಳ ಸೇವಕನಾಗಿದೆ. ಕಾನೂನು ಹದಗೆಟ್ಟಾಗ ಕ್ರಿಮಿನಲ್ ಗಳು ರಾಜಾರೋಷವಾಗಿ ತಿರುಗಾಡುತ್ತಾರೆ. ಮುಖ್ಯಮಂತ್ರಿಗಳು ಒಂದು ಟ್ವೀಟ್ ಮಾಡಿದರೆ ನಿಮ್ಮ ಕೆಲಸ ಮುಗಿಯಿತೇ. ಗದಗ ನಗರದ‌ ಜನರು ಸಂಪೂರ್ಣ ಭಯ ಭೀತರಾಗಿದ್ದಾರೆ. ಯಾವ ರಾಜ್ಯದಲ್ಲಿ ಜನರು ರಾತ್ರಿ ನೆಮ್ಮದಿಯಿಂದ ಮಲಗಲು ಸಾಧ್ಯವಿಲ್ಲವೊ ಅದನ್ನು ಜಂಗಲ್ ರಾಜ್ಯ ಎನ್ನಲಾಗುತ್ತದೆಯೇ ಎಂದು ರಾಜ್ಯ ಸರ್ಕಾರದ ವಿರುದ್ದ ಕಟು ಶಬ್ದಗಳಿಂದ ಟೀಕಿಸಿದರು.
ಜನರ ಮಾನ ಪ್ರಾಣ ಕಾಪಾಡುವಲ್ಲಿ ಈ ಸರ್ಕಾರ ಸಂಪೂರ್ಣ ಎಡವಿದೆ. ಕಾಂಗ್ರೆಸ್ ಸರ್ಕಾರ ಜನರಿಗೆ ಗ್ಯಾರೆಂಟಿಗಳನ್ನು ಕೊಡುತ್ತಿದೆ ಈ ಸರ್ಕಾರದಲ್ಲಿ ಕೊಲೆ ಗ್ಯಾರೆಂಟಿ ಎನ್ನುವಂತಾಗಿದೆ. ಹಿಂದೆ ಆಗಿಲ್ವಾ ಎಂದು ಸರ್ಕಾರ ಈಗಿನ ಘಟನೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ನಮ್ಮ ಅವಧಿಯಲ್ಲಿ ಚಿಕ್ಕಮಗಳೂರಿನಲ್ಲಿ ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆದಾಗ ನಾವು ಅವನನ್ನು ಗಲ್ಲಿಗೇರಿಸುವಂತೆ ಕ್ರಮ ಕೈಗೊಂಡಿದ್ದೇವೆ. ಈ ಪ್ರಕರಣದ್ಲಿಯೂ ಅದೇ ರೀತಿ ಆಗಲಿ ಎಂದು ಆಗ್ರಹಿಸಿದರು.
ಡಿಜಿಪಿ, ಐಜಿಪಿ ಎಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಒಮ್ಮೆಯಾದರೂ ಒಂದು ರೌಡಿಗಳ ಪರೇಡ್ ಮಾಡಿದ್ದೀರಾ ? ಗದಗನಲ್ಲಿ ರೌಡಿಗಳ ಪರೇಡ್ ಮಾಡಿಸಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.
ಬಾಕಳೆ ಕುಟುಂಬದ ಜೊತೆ ನಾವುದ್ದೇವೆ
ಪೊಲಿಸರು ಕೆಲವು ಸಲ ಕ್ರಮ ಕೈಗೊಳ್ಳಲು ಮುಂದಾದರೂ ಅವರ ಮೇಲೆ ರಾಜಕೀಯ ಪ್ರಭಾವ ಬೀರಲಾಗುತ್ತಿದೆ. ಪೊಲಿಸರು ಅಸಹಾಯಕರಾಗಿದ್ದಾರೆ. ಇದು ಕೇವಲ ಬಾಕಳೆ ಅವರ ಕುಟುಂಬದ ವಿಷಯವಲ್ಲ. ಇದು ಇಡೀ ಸಮಾಜದ ವಿಷಯ. ಆ ಕುಟುಂವದವರು ನೆಮ್ಮದಿಯಾಗಿ ನಿದ್ದೆ ಮಾಡದ ಪರಿಸ್ಥಿತಿ ಇದೆ. ಜನನಿಬಿಡ ಪ್ರದೇಶದಲ್ಲಿ ಬಂದು ಧೈರ್ಯವಾಗಿ ಕೊಲೆ ಮಾಡಿದ್ದಾರೆ ಎಂದರೆ ಅವರಿಗೆ ಭಯ ಇಲ್ಲ. ಕೊಲೆ ಮಾಡಿದವರನ್ನು ಗಲ್ಲಿಗೇರಿಸಬೇಕು. ಈ ಪ್ರಕರಣದಲ್ಲಿ ಸರ್ಕಾರ ಬದುಕಿದೆಯೋ ಸತ್ತಿದೆಯೋ ಎನ್ನುವುದು ಗೊತ್ತಾಗುತ್ತದೆ.
ನಾವು ಈ ಕುಟುಂಬದ ಜೊತೆಗೆ ಇರುತ್ತೇವೆ. ಈ ಜನರ ಜೊತೆಗೆ ನಾವಿದ್ದೇವೆ ಎಂದು ಹೇಳಿದರು.
ನಮ್ಮ ಅವಧಿಯಲ್ಲಿ ಸಮಾಜ ಘಾತುಕ ಚಟುವಟಿಕೆಗಳು ನಡೆದಾಗ ನಮ್ಮ ಸರ್ಕಾರ ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ನಾವು ನೂರಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದೇವು. ಅವರು ಅಮಾಯಕರು ಅವರನ್ನು ಬಿಡುಗಡೆ ಮಾಡಿ ಎಂದು ಕಾಂಗ್ರೆಸ್ ಶಾಸಕರು ಪತ್ರ ಬರೆದಿದ್ದರು. ಅದು ತಪ್ಪು ಎಂದು ಕಾಂಗ್ರೆಸ್ ನ ಯಾವ ನಾಯಕರೂ ಹೇಳಲಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಿ.ಸಿ.ಪಾಟೀಲ್, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಜರಿದ್ದರು.

Leave a Reply

Your email address will not be published. Required fields are marked *