ಹಾವೇರಿ ಲೋಕಸಮರ: ಗೆಲುವಿನ ಹಾರ ಯಾರಿಗೆ? ಮಾಜಿ ಸಿಎಂ ಬೊಮ್ಮಾಯಿ, ಗಡ್ಡದೇವರಮಠ ಮಧ್ಯೆ ನೇರ ಹಣಾಹಣಿ

admin Avatar


ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬಿಸಿಲಿನ ತಾಪ‌ ಲೆಕ್ಕಿಸದೇ ಅಭ್ಯರ್ಥಿಗಳು ಘಟಾನುಘಟಿ ಸ್ಟಾರ್ ಪ್ರಚಾರಕರನ್ನು ಕರೆತಂದು ಕೊನೆಯ ಹಂತದಲ್ಲಿ ಮತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಬಿಜೆಪಿ ಸೋಲಿಸಲು ಕೈಪಡೆ ಬೆವರು ಹರಿಸುತ್ತಿದೆ. ಆದರೆ, ರಾಜಕಾರಣದ ಪಟ್ಟುಗಳ ಬಿಗಿಪಟ್ಟಿನೊಂದಿಗೆ ಬಿಜೆಪಿ ಹೆಜ್ಜೆ ಹಾಕುತ್ತಿರುವುದರಿಂದ ಕಣ ರಣರೋಚಕ ಎನಿಸಿದೆ. ಇಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮತದಾರರೆ ನಿರ್ಣಾಯಕರಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ‌ ಗಡ್ಡದೇವರಮಠ ನಡುವೆ ತುರುಸಿನ‌ ಫೈಟ್ ಜೋರಾಗಿದೆ. ಬಲಾಢ್ಯ ಬಿಜೆಪಿ ಅಭ್ಯರ್ಥಿ ಮುಂದೆ ಅನನುಭವಿ ಕಾಂಗ್ರೆಸ್ ಅಭ್ಯರ್ಥಿ ಎದುಸಿರುಬಿಡುತ್ತಿದ್ದಾರೆ. ಕ್ಷೇತ್ರದ ಎಂಟು‌ ವಿಧಾನಸಭೆ ಕ್ಷೇತ್ರಗಳ ಪೈಕಿ ಶಿರಹಟ್ಟಿ ‌ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಉಳಿದೆಲ್ಲ ಕಡೆಗೂ ಕಾಂಗ್ರೆಸ್ ಶಾಸಕರಿದ್ದಾರೆ ಎಂಬುದೇ ಕೈಪಡೆಗೆ ಬಹುದೊಡ್ಡ ಬಲ. ಪಂಚ ಗ್ಯಾರಂಟಿಗಳೆ ಕಾಂಗ್ರೆಸ್ ಚುನಾವಣೆಯ ಜೀವಾಳವಾಗಿವೆ. ಮನೆಮನೆಗೆ ತೆರಳಿ ಗ್ಯಾರಂಟಿಗಳ ಕುರಿತು ಮನವರಿಕೆ ಮಾಡಿ ಮತದಾರನ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ ಎಂಬುದು ಕೈ ಅಭ್ಯರ್ಥಿಗೆ ಶಕ್ತಿಯ ಜತೆಗೆ ಗೆಲ್ಲುವ ಭರವಸೆ ಮೂಡಿದೆ.
ಪ್ರಚಾರದ ಅಬ್ಬರಕ್ಕೆ‌ಹೋಲಿಸಿದರೆ ಬಿಜೆಪಿ ಕೊಂಚ‌ ಮುಂದಿದೆ. ಅನೇಕ ಚುನಾವಣೆಗಳನ್ನು‌ ಎದುರಿಸಿರುವ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಮ್ಮ‌ಚುನಾವಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.
ಶಿಗ್ಗಾಂವ ಶಾಸಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಹದಾಯಿ ಮತ್ತಿತರ ಪ್ರಮುಖ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದೆ. ಈ ಹಿಂದೆ ಮಹದಾಯಿ ಕುಡಿಯುವ ನೀರಿಗಾಗಿ ಹೋರಾಟವನ್ನೂ ಮಾಡಿದಂತವರು. ಅಖಂಡ ಧಾರವಾಡ ಜಿಲ್ಲೆಯಲ್ಲಿ ಸಂಪೂರ್ಣ ಚಿರಪರಿಚಿತರು. ಅಲ್ಲದೇ ಕ್ಷೇತ್ರವಾರು ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಈಡೇರಿಸುವ ಭರವಸೆ ನೀಡುವುದರೊಂದಿಗೆ ಜಾಗರೂಕತೆಯಿಂದ ಹೆಜ್ಜೆ ಹಾಕುತ್ತಿದ್ದಾರೆ.  ಇದಲ್ಲದೇ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಬಿಜೆಪಿ ಮೇಲುಗೈ ಸಾಧಿಸಿರುವುದು ವಿಶೇಷ. ನರೇಂದ್ರ ಮೋದಿಯೇ ಬಿಜೆಪಿಗೆ ಟ್ರಂಪ್ ಕಾರ್ಡ್ ಎನಿಸಿದ್ದಾರೆ, ದೇಶದ ಸುರಕ್ಷತೆಗೆ ಮತ ನೀಡಬೇಕು ಎಂದು ಹೇಳಿಕೊಂಡು ಬಿಜೆಪಿ ಮತಯಾಚನೆ ಮಾಡುತ್ತಿದೆ. ಆದರೆ ಕಾಂಗ್ರೆಸ್‌ಗೆ ಪಂಚ ಗ್ಯಾರಂಟಿ ಯೋಜನೆಗಳೆ ಜೀವ ಮತ್ತು ಜೀವಾಳವಾಗಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ ನಡ್ಡಾ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ ಸೇರಿ ಅನೇಕರು ಕ್ಷೇತ್ರದಲ್ಲಿ ಅಬ್ಬರಿಸುತ್ತಿದ್ದಾರೆ.
……
ಬಾಕ್ಸ್
ಮತದಾರರ ವಿವರ
ಪುರುಷರು: 8,95,366
ಮಹಿಳೆಯರು: 8,82,430
ಒಟ್ಟು: 17,17,877
……..
ಜಾತಿವಾರು ವಿವರ
* ವೀರಶೈವ ಲಿಂಗಾಯತರು 6.5 ಲಕ್ಷ
* ಕುರುಬರು  2 ಲಕ್ಷ
* ಎಸ್ಸಿ ಎಸ್ಟಿ 3.5 ಲಕ್ಷ
* ಮುಸ್ಲಿಂ 2 ಲಕ್ಷ
* ಇತರೆ 3 ಲಕ್ಷ
…….
ಬಿಜೆಪಿ ಪ್ಲಸ್
*:ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ, ರಾಜಕೀಯದಲ್ಲಿ ಅನುಭವಿ, ಕ್ಷೇತ್ರದಲ್ಲಿ ಚಿರಪರಿಚಿತರು.
* ಮೋದಿ‌ ಟ್ರಂಪ್ ಕಾರ್ಡ್, ಹಿಂದುತ್ವ ಅಜೆಂಡಾ

ಬಿಜೆಪಿ ಮೈನಸ್
* ಕಾಂಗ್ರೆಸ್ ಪರ ಗುರುತಿಸಿಕೊಂಡಿರುವ ಅಹಿಂದ ವರ್ಗದ ಮನವೊಲಿಕೆ ಬಹುದೊಡ್ಡ ಸವಾಲು
* ಕ್ಷೇತ್ರದ ಎಂಟು‌ ವಿಧಾನಸಭೆ ಕ್ಷೇತ್ರಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ.

ಕಾಂಗ್ರೆಸ್ ಪ್ಲಸ್
* ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು
* ಪಂಚ ಗ್ಯಾರಂಟಿಗಳೆ ಚುನಾವಣೆ ಅಸ್ತ್ತ
* ಲಿಂಗಾಯತ ಮತಗಳನ್ನು ಸೆಳೆಯುವ ನಿರೀಕ್ಷೆ

ಕಾಂಗ್ರೆಸ್ ಮೈನಸ್
* ಅಭ್ಯರ್ಥಿಗೆ ಸ್ಥಳೀಯ ತಳಮಟ್ಟದ ರಾಜಕಾರಣದ ತಿಳಿವಳಿಕೆ ಕಡಿಮೆ.
* ಕ್ಷೇತ್ರದಲ್ಲಿ ಮುಖ ಪರಿಚಯ ಇಲ್ಲ.ರಾಜಕೀಯ ಅನುಭವದ ಕೊರತೆ
* ಸ್ಥಳೀಯ ನಾಯಕರ ಮೇಲೆ ಸಂಪೂರ್ಣ ಅವಲಂಬನೆ ಮುಳುವಾಗುವ ಸಾಧ್ಯತೆ
…..

ಕ್ಷೇತ್ರಗಳು
* ಗದಗ -ಎಚ್ ಕೆ ಪಾಟೀಲ (ಕಾಂಗ್ರೆಸ್)
* ರೋಣ- ಜಿ ಎಸ್ ಪಾಟೀಲ (ಕಾಂಗ್ರೆಸ್)
* ಶಿರಹಟ್ಟಿ-ಡಾ ಚಂದ್ರು ಲಮಾಣಿ (ಬಿಜೆಪಿ)
* ಹಾವೇರಿ -ರುದ್ರಪ್ಪ ಲಮಾಣಿ (ಕಾಂಗ್ರೆಸ್)
* ಬ್ಯಾಡಗಿ-ಬಸವರಾಜ ಶಿವಣ್ಣವರ (ಕಾಂಗ್ರೆಸ್)
* ಹಿರೇಕೆರೂರ- ಯು ಬಿ ಬಣಕಾರ (ಕಾಂಗ್ರೆಸ್)
* ರಾಣೆಬೆನ್ನೂರು- ಪ್ರಕಾಶ ಕೋಳಿವಾಡ (ಕಾಂಗ್ರೆಸ್)
* ಹಾನಗಲ್- ಶ್ರೀನಿವಾಸ ಮಾನೆ (ಕಾಂಗ್ರೆಸ್)
….

ಕಳೆದ ಮೂರು ಚುನಾವಣೆಯ ವಿವರ
2009
* ಶಿವಕುಮಾರ ಉದಾಸಿ (ಬಿಜೆಪಿ) 4,30,293
* ಸಲೀಂ ಅಹ್ಮದ (ಕಾಂಗ್ರೆಸ್) 3,42,373
ಬಿಜೆಪಿ ಗೆಲುವಿನ ಅಂತರ- 87,920

2014
* ಶಿವಕುಮಾರ ಉದಾಸಿ (ಬಿಜೆಪಿ) 5,66,790
* ಸಲೀಂ ಅಹ್ಮದ (ಕಾಂಗ್ರೆಸ್) 4,79,219
ಗೆಲುವಿನ ಅಂತರ -87,571

2019
* ಶಿವಕುಮಾರ ಉದಾಸಿ (ಬಿಜೆಪಿ) 6,83,660
*  ಡಿ ಆರ್ ಪಾಟೀಲ (ಕಾಂಗ್ರೆಸ್) 5,42,778
ಗೆಲುವಿನ ಅಂತರ -1,40,862

Leave a Reply

Your email address will not be published. Required fields are marked *