ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸದಿದ್ದರೆ ಹೋರಾಟ ಮಾಡಲಾಗುವುದು: ಬಸವರಾಜ ಬೊಮ್ಮಾಯಿ

admin Avatar

ರೈತರಿಗೆ ನಾಲ್ಕು ಸಾವಿರ ಕೊಟ್ಟಿದ್ದರೆ ‌ನಿಮ್ಮ ಗಂಟೇನು ಹೋಗುತ್ತಿತ್ತು: ಬಸವರಾಜ ಬೊಮ್ಮಾಯಿ

ಗದಗ(ಮುಂಡರಗಿ) ಸಿಂಗಟಾಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸದಿದ್ದರೆ ಹೋರಾಟ ಮಾಡಲಾಗುವುದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.‌
ಅವರು ಇಂದು ಮುಂಡಗರಿಯಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.ಮುಂಡರಗಿ ತಾಲೂಕಿನ ಮಣ್ಣು ಫಲವತ್ತಾದ ಮಣ್ಣು, ಮುಂಡರಗಿ ತಾಲೂಕಿನ ಮಣ್ಣಿಗೆ ತುಂಗಭದ್ರಾ ನೀರು ಹರಿಸಿದರೆ ಭೂಮಿತಾಯಿ ಬಂಗಾರದ ಬೆಳೆ ಕೊಡುತ್ತಾಳೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಜಾರಿ ಮಾಡಿದ್ದು ನಾನು. ಒಂದು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ, ನಾಲ್ಕು ಹಳ್ಳಿಗಳನ್ನು ಸ್ಥಳಾಂತರ ಮಾಡಿ ಕೆನಾಲ್ ಗಳನ್ನು ಮಾಡಿದ್ದೇವೆ. ಹನಿ ನೀರಾವರಿ ಮಾಡುವ ಗುರಿ‌ ಇದೆ. ಆದರೆ, ಈ ಸರ್ಕಾರ ಯೋಜನೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ರಾಜ್ಯ ಸರ್ಕಾರ ಈ ಭಾಗಕ್ಕೆ ನೀರು ಕೊಡದಿದ್ದರೆ ದೊಡ್ಡ ಹೋರಾಟ ಮಾಡಲಾಗುವುದು. ಕೇವಲ ಮುಂಡರಗಿ ಅಷ್ಟೇ ಅಲ್ಲ, ಗದಗ, ರೋಣ, ಕೊಪ್ಪಳ ಭಾಗದವರೆಗೂ ಭೂಮಿ ತಾಯಿ ಹಸಿರು ಸೀರೆ ಉಟ್ಟು ಕಂಗೊಳಿಸಬೇಕು ಎಂದು ಹೇಳಿದರು.
ಜಾಲವಾಡಗಿ ಏತ ನೀರಾವರಿ ಈ ಭಾಗಕ್ಕೆ ತುರ್ತಾಗಿ ಬೇಕಾಗಿದೆ. ಕೂಡಲೆ ಅದನ್ನು ಟೆಂಡರ್ ಕರೆದಿದ್ದೆವು.ಇವತ್ತಿನ ಸರ್ಕಾರ ಅದನ್ನು ನಿಲ್ಲಿಸಿದೆ ಎಂದರು.
ನಮ್ಮ ಪ್ರಧಾನಿ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆ ಮಾಡಿದ್ದೇವು. ಅದನ್ನು ನಿಲ್ಲಿಸಿದ್ದಾರೆ. ರೈತರ ವಿಚಾರದಲ್ಲಿ ರಾಜಕಾರಣ ಮಾಡಿದ್ದಾರೆ.‌ ರೈತರಿಗೆ ನಾಲ್ಕು ಸಾವಿರ ಕೊಟ್ಟಿದ್ದರೆ ನಿಮ್ಮ ಗಂಟೇನು ಹೋಗುತ್ತಿತ್ತು. ರೈತ ವಿದ್ಯಾನಿಧಿ ಯೋಜನೆ ಮಾಡಿದ್ದೇವು ಅದನ್ನು ನಿಲ್ಲಿಸಿದರು. ರೈತ ಶಕ್ತಿ ನಿಲ್ಲಿಸಿದರು. ಯಶಸ್ವಿನಿ ನಿಲ್ಲಿಸಿದರು. ಬರ ಬಂದು ಹತ್ತು ತಿಂಗಳಾಯಿತು ರಾಜ್ಯ ಸರ್ಕಾರದ ಬೊಕ್ಕಸದಿಂದ ನಯಾ ಪೈಸೆ ಕೊಟ್ಟಿಲ್ಲ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಎರಡು ಪಟ್ಟು ಪರಿಹಾರ ಕೊಟ್ಟಿದ್ದೇವೆ. ನಾವು ರೈತರನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೇವು, ನೀವು ರೈತರನ್ನು ಕಾಲ ಕಸದಂತೆ ನೋಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಗ್ಯಾರೆಂಟಿ ‌ಮೋಸ
ಗ್ಯಾರೆಂಟಿ ಮಾಡಿ ಎಲ್ಲರನ್ನೂ ಉದ್ದಾರ ಮಾಡಿದ್ದೇವೆ ಎಂದು ಹೇಳುತ್ತಾರೆ. ಅದನ್ನು ನೋಡಲು ಕಾಂಗ್ರೆಸ್ ‌ಕಾರ್ಯಕರ್ತರಿಗೆ ಅಧಿಕಾರ ಕೊಟ್ಟಿದ್ದಾರೆ. ಖಜಾನೆ ಲೂಟಿ ಮಾಡುತ್ತಿದ್ದಾರೆ.‌ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಈಗ ಬರುತ್ತಿರುವುದು ಮೋದಿ ಕೊಡುತ್ತಿರುವ ಅಕ್ಕಿ, ಗೃಹಲಕ್ಷ್ಮೀಗೆ ಹೆಣ್ಣು ಮಕ್ಕಳು ಅಲೆದಾಡಿ ಅವರ ಚಪ್ಪಲಿ ಸವೆಯುತ್ತಿವೆ. ಯುವ ನಿಧಿ ಯಾರಿಗೂ ತಲುಪಿಲ್ಲ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಬರುವ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣ ಇರುವುದಿಲ್ಲ ಎಂದರು.
ರಾಹುಲ್ ಗಾಂಧಿಗೆ ರಾತ್ರಿ ಏನು ಕನಸು ಬೀಳುತ್ತದೆ. ಅದನ್ನು ಬೆಳಿಗ್ಗೆ ಹೇಳುತ್ತಾರೆ. ಎಲ್ಲರ ಆಸ್ತಿ ಎಷ್ಟಿದೆ ಅಂತ ಎಲ್ಲರಿಗೂ ಗೊತ್ತಿದೆ. ಆಸ್ತಿ ಹಂಚುವುದಿದ್ದರೆ ಮೊದಲು ನಿಮ್ಮ ಆಸ್ತಿ ಹಂಚಿ ಎಂದು ಸವಾಲು ಹಾಕಿದರು.
ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳಿಗೆ ನೀಡಲು ಸರ್ಕಾರಕ್ಕೆ ಶೇ 55% ರಷ್ಟು ತೆರಿಗೆ ಕಟ್ಟಬೇಕಂತೆ, ಇಂತ ಹುಚ್ಚಾಟವನ್ನು ಮಾತನಾಡುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾ ಎಂದು ಪ್ರಶ್ನಿಸಿದರು.
ಕೊವಿಡ್ ಸಂದರ್ಭದಲ್ಲಿ ಎಲ್ಲರ ಜೀವ ಉಳಿಸಿರುವ ಮೋದಿಯವರ ಋಣ ತೀರಿಸಬೇಕು. ಅನ್ನಕೊಟ್ಟು, ನೀರು ಕೊಟ್ಟು, ಜೀವ ಉಳಿಸಿದ ಮೋದಿಯವರಿಗೆ ಮತಹಾಕುವಂತೆ ಮನವಿ ಮಾಡಿದರು.
ಸಮಾವೇಶದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಕಳಕಪ್ಪ ಬಂಡಿ, ಸಂಸದ ಶಿವಕುಮಾರ್ ಉದಾಸಿ, ಶಾಸಕ ಚಂದ್ರು ಲಮಾಣಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *