ರಾಹುಲ್ ಗಾಂಧಿ ಮೊದಲು ನಿಮ್ಮ ಬೇನಾಮಿ ಆಸ್ತಿ ಹಂಚಿಕೆ ಮಾಡಿ: ಬಸವರಾಜ ಬೊಮ್ಮಾಯಿ

admin Avatar

ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಸ್ಥಗಿತಗೊಳಿಸಿರುವ ಕಾಂಗ್ರೆಸ್ ಗೆ ಈ ಭಾಗದಲ್ಲಿ ಮತ ಕೇಳುವ ನೈತಿಕತೆ ಇಲ್ಲ: ಬಸವರಾಜ ಬೊಮ್ಮಾಯಿ

ಗದಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದೇಶದ ಆಸ್ತಿಯನ್ನು ಮರು ಹಂಚಿಕೆ ಮಾಡುವುದಾಗಿ ಹೇಳುತ್ತಾರೆ. ಮೊದಲು ನಿಮ್ಮ ಬೇನಾಮಿ‌ ಆಸ್ತಿಯನ್ನು ಜನರಿಗೆ ಹಂಚಿಕೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದರು.
ಗಜೇಂದ್ರಗಡದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂಡಿ ಒಕ್ಕೂಟದಲ್ಲಿ ಯಾರು ಪ್ರಧಾನಿ ಅಭ್ಯರ್ಥಿ ಅಂತ ಗೊತ್ತಿಲ್ಲ. ಮಮತಾ ಬ್ಯಾನರ್ಜಿ ತಾನೇ ಪ್ರಧಾನಿ ಅಂತಾರೆ, ಕೇಜ್ರಿವಾಲ್ ಜೈಲಿನಲ್ಲಿದ್ದುಕೊಂಡು ತಾನೇ ಪಿಎಂ ಆಗುತ್ತೇನೆ ಎನ್ನುತ್ತಾರೆ. ಶರತ್ ಪವಾರ್ ನಾನೂ ಪ್ರಧಾ‌ನಿ ಆಗುತ್ತೇನೆ ಅನ್ನುತ್ತಾರೆ. ಲಾಲೂ ಪ್ರಸಾದ್ ಯಾದವ್ ನಾನೂ ಒಂದು ಕೈ ನೋಡುತ್ತೇನೆ ಎನ್ನುತ್ತಾರೆ.
ರಾಹುಲ್ ಗಾಂಧಿಗೆ ಪ್ರಧಾನಿ ಆಗು ಎಂದರೆ ಬೇಡ ಎನ್ನುತ್ತಾರೆ. ವಯಸ್ಸಿಗೆ ಬಂದ‌ ಮಗ ಮದುವೆ ಬೇಡ ಅಂತ ಹೇಳುತ್ತಾನೆ ಎಂದರೆ ಏನು ಎಂದು ತಿಳಿದುಕೊಳ್ಳಬೇಕು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ಎಷ್ಟು ವರ್ಷ ಜನರಿಗೆ ಮೋಸ ಮಾಡಬೇಕೆಂದುಕೊಂಡಿದ್ದೀರಿ, ಸುಳ್ಳಿನಲ್ಲಿ ಕಾಂಗ್ರೆಸ್ ಹುಟ್ಟಿದೆ, ಮೋದಿಯವವರು ಮೂರನೇ ಬಾರಿ ಪ್ರಧಾನಿಯಾದರೆ ಕಾಂಗ್ರೆಸ್ ಮುಕ್ತಾಯವಾಗುತ್ತದೆ. ಈಗ ಮನೆ ಮನೆಗೆ ಗ್ಯಾರೆಂಟಿ ಕಾರ್ಡ್ ಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಗ್ಯಾರೆಂಟಿ ಕಾರ್ಡ್ ಗಳಿಗೆ ಮಲ್ಲಿಕಾರ್ಜುನ‌ ಖರ್ಗೆ ಸಹಿ ಮಾಡಿ ಕೊಡುತ್ತಿದ್ದಾರೆ. ಖರ್ಗೆ ಯಾರು? ಈ ದೇಶದ ಪ್ರಧಾನಿನಾ ? ರಾಷ್ಟ್ರಪತಿನಾ ? ಕಾಂಗ್ರೆಸ್ ಪಕ್ಷ ನಲವತ್ತು ಸ್ಥಾನವನ್ನೂ ಗೆಲ್ಲುವುದಿಲ್ಲ. ಅವರು ಸ್ಪರ್ಧೆ ಮಾಡಿರುವುದೇ 200 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ನವರು ಹತ್ತು ಮಾರ್ಕ್ ನ ಪ್ರಶ್ನೆ ಪ್ರತ್ರಿಕೆ ಬಿಡಿಸಿ, ಮೂವತೈದು ಅಂಕ ಪಡೆಯುತ್ತೇನೆ ಎಂದು ಹೇಳುತ್ತಾರೆ. ಕಾಂಗ್ರೆಸ್ ‌ಫೇಲ್ ಆಗುವ ಪಕ್ಷ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬರಗಾಲ ಗ್ಯಾರೆಂಟಿ, ಭ್ರಷ್ಟಾಚಾರ ಗ್ಯಾರೆಂಟಿ ಆಗಿದೆ. ಬರಗಾಲ ಬಂದರೂ ಯಾವುದೇ ಪರಿಹಾರ ಇಲ್ಲ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ.‌ ಸರ್ಕಾರ ದಿವಾಳಿಯಾಗಿದೆ. ಇದೇ‌ ಪರಿಸ್ಥಿತಿ ಮುಂದುವರೆದರೆ ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ಮಾಶಾಸನ ಎಲ್ಲವೂ ನಿಂತು ಹೋಗುತ್ತವೆ ಎಂದರು.
ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ನಾವು ಕೇಂದ್ರ ಸರ್ಕಾರದ ಕಡೆಗೆ ನೋಡದೆ ಎರಡು ಪಟ್ಟು ಪರಿಹಾರ ಕೊಟ್ಟಿದ್ದೇವೆ. ಇದು ನಮ್ಮ ಸಾಮರ್ಥ್ಯ, ನಿಮಗೆ ಸಾಮರ್ಥ್ಯ ಇದ್ದರೆ, ರೈತರಿಗೆ ಪರಿಹಾರ ನೀಡಿ, ಜನರು ನಿಮಗೆ ಕೆಲಸ ಮಾಡಲು ಅಧಿಕಾರ ನೀಡಿದ್ದಾರೆ ಎಂದರು.
ಕಾಂಗ್ರೆಸ್ ನವರು ಉತ್ತರ ಕರ್ನಾಟದಕ ಭಾಗದ ನೀರಾವರಿ ಯೋಜನೆಗಳನ್ನು ಸಂಪೂರ್ಣ ನಿಲ್ಲಿಸಿದ್ದಾರೆ. ಜಾಲವಾಡಗಿ, ಸಿಂಗಟಾಲೂರು, ಕೊಪ್ಪಳ ಏತ ನೀರಾವರಿ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಾರೆ. ನಿಮಗೆ ಸಾಮರ್ಥ್ಯ ಇದ್ದರೆ ನೀರಾವರಿಗೆ ಹಣ ಕೊಟ್ಟು ಯೋಜನೆ ಪ್ರಾರಂಭಿಸುವಂತೆ ಆಗ್ರಹಿಸಿದರು.

Leave a Reply

Your email address will not be published. Required fields are marked *