ಗದಗದಲ್ಲಿ ನಾಲ್ವರ ಭೀಕರ ಕೊಲೆ ಕೇಸ್: ಮನೆಯ ಹಿರಿಮಗನೆ ಸೇರಿ ಎಂಟು ಜನರ ಅರೆಸ್ಟ್! 48 ಗಂಟೆಯಲ್ಲೇ ಹಂತಕರ‌ ಹೆಡೆಮುರಿ ಕಟ್ಟಿದ ಗದಗ ಪೊಲೀಸರು, ಎಸ್ಪಿ ನೇಮಗೌಡರ ಆ್ಯಂಡ್ ಟೀಮ್ ಕಾರ್ಯ ಶ್ಲಾಘನೀಯ

admin Avatar

ಗದಗ: ಗದಗ ಬೆಟಗೇರಿ ಅವಳಿ ನಗರವನ್ನು ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಹತ್ಯೆಯ ರಹಸ್ಯ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ಸಂಬಂಧ 8 ಮಂದಿ ಆರೋಪಿಗಳನ್ನು 48 ಗಂಟೆಯೊಳಗೆ ಬಂಧಿಸಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸಕುಮಾರ ತಿಳಿಸಿದ್ದಾರೆ.
ಘಟನೆ ಸಂಬಂಧ ಪ್ರಮುಖ ಆರೋಪಿ ವಿನಾಯಕ ಬಾಕಳೆ ಸೇರಿದಂತೆ ಇತರ ಆರೋಪಿಗಳಾದ ಗದಗ ನಗರದ ಫೈರೋಜ್ ಖಾಜಿ, ಜಿಶಾನ್ ಖಾಜಿ, ಮೀರಜ್​ ಮೂಲದ ಸಾಹಿಲ್, ಸೋಹೆಲ್ ಖಾಜಿ, ಸುಲ್ತಾನ್ ಶೇಖ್, ಮಹೇಶ್ ಸಾಳೋಂಕೆ, ವಾಹಿದ್ ಬೇಪಾರಿಯನ್ನು ಬಂಧಿಸಲಾಗಿದೆ.
ಪ್ರಕರಣದ ಮೊದಲ ಆರೋಪಿ ವಿನಾಯಕ ಬಾಕಳೆ (ಪ್ರಕಾಶ ಬಾಕಳೆಯ ಮೊದಲ ಪತ್ನಿಯ ಮಗ) ಆರೋಪಿ ಫೈರೋಜ್​ಗೆ 65 ಲಕ್ಷ ರೂಪಾಯಿ ಹಣಕ್ಕೆ ಸುಪಾರಿ ಕೊಲೆಗೆ ಡೀಲ್​ ಕೊಟ್ಟಿದ್ದ. ಮುಂಗಡವಾಗಿ 2 ಲಕ್ಷ ರೂಪಾಯಿ ಕೊಟ್ಟಿದ್ದ ವಿನಾಯಕ ಬಾಕಳೆ, ತಂದೆ ಪ್ರಕಾಶ ಬಾಕಳೆ, ಅವರ ಪತ್ನಿ ಸುನಂದಾ ಹಾಗೂ ಪುತ್ರ ಕಾರ್ತಿಕ್ ಕೊಲೆಗೆ ಸಂಚು ಹೂಡಿದ್ದ. ತಂದೆ ಪ್ರಕಾಶ ಜೊತೆ ವ್ಯವಹಾರಿಕ ವೈಮನಸ್ಸಿನ ಕಾರಣ ಈ ಕೊಲೆಗೆ ಆತ ಸಂಚು ಹೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕಾಶ ಹಿರಿಯ ಮಗನ ಹೆಸರಿನಲ್ಲಿ ಸಾಕಷ್ಟು ಆಸ್ತಿ ಮಾಡಿದ್ದರು. ಆದರೆ, ಪ್ರಕಾಶ ಗಮನಕ್ಕೆ ತಾರದೇ ಮಗ ವಿನಾಯಕ್ ಕೆಲ ಆಸ್ತಿ ಮಾರಿದ್ದ. ಆತನ ವರ್ತನೆಗೆ ಬೇಸತ್ತು ಜಗಳವಾಡಿದ್ದ ಪ್ರಕಾಶ ಬಾಕಳೆ ಜಗಳವಾಡಿದ್ದರು. ಆಸ್ತಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪ್ರಕಾಶ, ಪತ್ನಿ ಸುನಂದಾ, ಪುತ್ರ ಕಾರ್ತಿಕ್​ ಹತ್ಯೆಗೆ ಆರೋಪಿ ವಿನಾಯಕ ಸಂಚು ಹೂಡಿದ್ದ.
ಘಟನೆ ದಿನ ಪ್ರಕಾಶ ಹಾಗೂ ಅವರ ಪತ್ನಿ ಸುನಂದಾ ಬೇರೆ ಕೋಣೆಯಲ್ಲಿ ಮಲಗಿದ್ದರು. ಹೀಗಾಗಿ ಅವರು ಸಾವಿನಿಂದ ಬಚಾವ್ ಆಗಿದ್ದಾರೆ. ಮನೆಗೆ ನುಗ್ಗಿದ್ದ ಹಂತಕರು ಅವರ ಬದಲಿಗೆ ಕಾರ್ತಿಕ್ ಜತೆ ಇದ್ದ ಸಂಬಂಧಿಕರನ್ನು ಹತ್ಯೆ ಮಾಡಿದ್ದಾರೆ. ಪ್ರಕಾಶ ಹಾಗೂ ಸುನಂದಾ ಎಂದು ಭಾವಿಸಿ ಹಂತಕರು ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಜತೆಗಿದ್ದ ಕೊಪ್ಪಳದ ಭಾಗ್ಯ ನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಅವರನ್ನು ಹತ್ಯೆ ಮಾಡಿದ್ದರು.

Leave a Reply

Your email address will not be published. Required fields are marked *