ರಾಜ್ಯ ಸರ್ಕಾರದ ಬಳಿ ರೈತರ ಹಾಲಿನ ಬಾಕಿ ಕೊಡಲು ಹಣ ಇಲ್ಲ: ಬಸವರಾಜ ಬೊಮ್ಮಾಯಿ
ಗದಗ: ಪ್ರಧಾನಿ ನರೇಂದ್ರ ಮೋದಿಯವರು ಅಪ್ಪಟ ದೇಶಭಕ್ತರಾಗಿದ್ದು, ಅವರು ದೇಶಕ್ಕಾಗಿ ದಿನದ 18 ಗಂಟೆ ನಿರಂತರ ಕೆಲಸ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಶನಿವಾರ ಗದಗ ತಾಲೂಕಿನ ಮಲ್ಲಸಂದ್ರ, ಅಸುಂಡಿ, ಬಿಂಕದಕಟ್ಟೆ, ಅಂತೂರು ಬೆಂತೂರು, ಹೊಸಳ್ಳಿ, ನೀಲಗುಂದ, ಚಿಂಚಲಿ ಹಾಗೂ ಕಲ್ಲೂರು ಗ್ರಾಮಗಳಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದರು. ಬಲಿಷ್ಟ ದೇಶಕ್ಕೆ ಬಲಿಷ್ಟ ನಾಯಕತ್ವ ಬೇಕು. ಬಿಜೆಪಿ ಜಗತ್ತಿನ ಅತಿ ದೊಡ್ಡ ಪಕ್ಷ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಲಿಷ್ಠ ನಾಯಕರಾಗಿದ್ದಾರೆ ಎಂದು ಹೇಳಿದರು.
ಮೋದಿಯವರು ತಮ್ಮ ತಾಯಿ ನಿಧನ ಹೊಂದಿದಾಗ ಕೇವಲ ಮೂರು ಗಂಟೆಯಲ್ಲಿ ಅಂತ್ಯ ಸಂಸ್ಕಾರ ಮಾಡಿ ಮತ್ತೆ ದೇಶದ ಕರ್ತವ್ಯಕ್ಕೆ ಹಾಜರಾದ ಅಪ್ಪಟ ದೇಶಪ್ರೇಮಿ. ಮಾಜಿ ಪ್ರಧಾನಿ ನಂತರ ಪ್ರಧಾನನಿ ನರೇಂದ್ರ ಮೋದಿಯವರು ಅತ್ಯಂತ ದೇಶಭಕ್ತರಾಗಿದ್ದಾರೆ ಎಂದರು.
ದೇಶದಲ್ಲಿ ದುರ್ಬಲ ನಾಯಕತ್ವ ಇದ್ದಾಗ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತವೆ. ಬಲಿಷ್ಟ ನಾಯಕತ್ವ ಇದ್ದರೆ ಎಲ್ಲರೂ ಹೆದರುತ್ತಾರೆ. ಮೋದಿಯವರು ರಷ್ಯಾ ಉಕ್ರೇನ್ ಯುದ್ದ ನಿಲ್ಲಿಸಿ ನಮ್ಮ ದೇಶದ 24 ಸಾವಿರ ಮಕ್ಕಳನ್ನು ರಕ್ಷಣೆ ಮಾಡಿ ಕರೆದುಕೊಂಡು ಬಂದರು. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಭಯೋತ್ಪಾದಕರು ಬಂದು ದಾಳಿ ಮಾಡಿದರೆ ಅವರು ಪಾಕಿಸ್ತಾನಕ್ಕೆ ಪತ್ರ ಬರೆದು, ಭಯೋತ್ಪಾದಕರಿಗೆ ಬುದ್ದಿ ಹೇಳಿ ಎಂದು ಕೇಳುತ್ತಿದ್ಸರು. ಆದರೆ, ಮೋದಿಯವರು ಅವರ ನೆಲದಲ್ಲಿ ಹೋಗಿ ಅವರನ್ನು ಹೊಡೆದುರುಳಿಸಿದ್ದಾರೆ. ಹೀಗಾಗಿ ಭಯೋತ್ಪಾದಕರಿಗೂ ಭಯ ಹುಟ್ಟುವಂತೆ ಮಾಡಿದ್ದಾರೆ ಎಂದು ಹೇಳಿದರು.
ಸಾಮಾಜಿಕವಾಗಿಯೂ ಮೋದಿಯವರು ಸಾಕಷ್ಟು ಸಹಾಯ ಮಾಡಿದ್ದಾರೆ. ಎಲ್ಲರಿಗೂ 10 ಕೆಜಿ ಅಕ್ಕಿ ಕೊಟ್ಟರು. ಕೊವಿಡ್ ಸಂದರ್ಭದಲ್ಲಿ ಎಲ್ಲರಿಗೂ ಮೂರು ಉಚಿತ ಲಸಿಕೆ ಹಾಕಿಸಿದರು. ನಮ್ಮ ದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮೋದಿಯವರು ನಾಲ್ಕು ಕೋಟಿ ಮನೆ ಕಟ್ಟಿಸಿದ್ದಾರೆ. ದೇಶದಲ್ಲಿ ನೂರು ಕೋಟಿ ಮನೆಗಳಿವೆ ಎಲ್ಲ ಮನೆಗಳಿಗೂ ಜಲ ಜೀವನ್ ಮಿಷನ್ ಮೂಲಕ ನಳದ ನೀರು ಕೊಡುತ್ತಿದ್ದಾರೆ. ಮೋದಿಯವರು ಶಾಸ್ವತ ಗ್ಯಾರೆಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ ಎಂದರು.
ಆರ್ಥಿಕ ದಿವಾಳಿ
ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆಡಳಿತ ಪಕ್ಷದ ಶಾಸಕರಿಗೆ ಅಭಿವೃದ್ದಿಗೆ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಬರ ಬಂದಿದೆ ರೈತರಿಗೆ ಕೇವಲ ಎರಡು ಸಾವಿರ ರೂ. ಪರಿಹಾರ ನೀಡಿ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಸುಮಾರು 1100 ಕೋಟಿ ರೂ. ಬಾಕಿ ಕೊಡಬೇಕಿದೆ. ಇದೊಂದು ರೈತ ವಿರೋಧಿ, ಬಡವರ, ದಲಿತರ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಜನರ ತೆರಿಗೆ ಹಣವನ್ನು ಗ್ಯಾರೆಂಟಿ ಗಳಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ವರ್ಷ ಒಂದು ಲಕ್ಷ ಐದು ಸಾವಿರ ಕೋಟಿ ಸಾಲ ಮಾಡಿದ್ದಾರೆ. ಪ್ರತಿಯೊಬ್ಬರ ತಲೆಯ ಮೇಲೆ ಐವತ್ತು ಸಾವಿರ ರೂ. ಸಾಲ ಹೇರಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಸರಕಾರ ಸಂಪೂರ್ಣ ದಿವಾಳಿಯಾಗಿದೆ. ಚರಂಡಿ ನಿರ್ಮಾಣ ಮಾಡಲು ಸಹ ಹಣವಿಲ್ಲದಂತಾಗಿದೆ. ರಾಜ್ಯ ಸರಕಾರ ಜನತೆಯ ಕೈಗೆ ಚೆಂಬು ನೀಡಿದೆಯೆಂದು ಆರೋಪಿಸಿದರು. ತಾವು ಮೂರು ವರ್ಷಗಳ ರಾಜ್ಯದ ಮುಖ್ಯಮಂತ್ರಿಗಳಾಗಿ ಅನೇಕ ಜನರು, ಬಡವರು, ರೈತರು, ಕೂಲಿಕಾರ್ಮಿಕರು, ಶೋಷಿತರ ಅಭಿವೃದ್ಧಿ, ಪರಿಶಿಷ್ಟರ ಮೀಸಲಾತಿ ಹೆಚ್ಚಳ ಮಾಡಿದ್ದೇನೆ. ಈ ಮಧ್ಯೆ ಬಿಜೆಪಿ ಜತೆಗೆ ಚಂಬು ಕೋಟ್ಟಿದೆ ಎಂದು ಸುಳ್ಳು ಜಾಹೀರಾತು ನೀಡಿ ತಮ್ಮ ತಪ್ಪನ್ನು ಮರೆ ಮಾಚಲು ಪ್ರಯತ್ನಿಸುತ್ತಿದೆಯೆಂದು ಆರೋಪಿಸಿದರು.
ಎಲ್ಲರಿಗೂ ಅನ್ನ, ಮನೆಗಳಿಗೆ ನೀರು, ಎಲ್ಲರಿಗೂ ಲಸಿಕೆ ಕೊಟ್ಟು ಜೀವ ಉಳಿಸಿದ ನರೇಂದ್ರ ಮೋದಿಯವರ ಋಣ ತೀರಿಸುವ ಸಮಯ ಬಂದಿದೆ. ಅವರ ಋಣ ತೀರಿಸಲು ಬಿಜೆಪಿಗೆ ಮತ ಹಾಕಿ, ಈ ಚುನಾವಣೆಯಲ್ಲಿ ನನ್ನನ್ನು ಈ ಕ್ಷೇತ್ರದ ಸಂಸದನನ್ನಾಗಿ ಆಯ್ಕೆ ಮಾಡಿದರೆ, ನಿಮ್ಮ ಸೇವೆಯನ್ನು ಸಂಸತ್ತಿನಲ್ಲಿ ಸಿಂಹ ಗರ್ಜನೆ ರೀತಿಯಲ್ಲಿ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಹಾಜರಿದ್ದರು.
Leave a Reply