ಕನ್ನಡ ಚಿತ್ರರಂಗದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ (81) ಅವರು ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. 1942 ಆಗಸ್ಟ್ 19 ರಂದು ಹುಣಸೂರು ನಲ್ಲಿ ಜನಿಸಿದ ದ್ವಾರಕೀಶ ಅವರು, ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ದರು.
ಬೆಂಗಳೂರಿನ ಶಾರದಾ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ ಪಾಲಿಟೆಕ್ನಿಕ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿದರು. ತದನಂತರ ಅವರ ಸೋದರನ ಜತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದರು. 1963ರಲ್ಲಿ ಸಿನೆಮಾ ಕಡೆಗೆ ವಾಲಿದರು. ಕನ್ನಡ ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯ ದ್ವಾರಕೀಶ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ವಿಷ್ಣುವರ್ಧನ್, ರಾಜಕುಮಾರ ಹಾಗೂ ಅಂಬರೀಶ ಅವರಂತಹ ಮೇರು ನಟರೊಂದಿಗೆ ಹಿರಿಯ ತೆರೆಯಲ್ಲಿ ಮಿಂಚಿರುವ ನಟ ದ್ವಾರಕೀಶ್ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
40ಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಕನ್ನಡ ಜನತೆಗೆ ಜನಪ್ರಿಯ ರಾಜಕುಳ್ಳ ಎಂದೇ ಪ್ರಸಿದ್ಧಿ ಪಡೆದ ಹೆಸರಾಂತ ನಟರಾಗಿದ್ದಾರೆ.
Leave a Reply