ಹುಬ್ಬಳ್ಳಿ : ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಣಕ್ಕೆ ನಿಲ್ಲುತ್ತಾರೆ ಎನ್ನುವ ಚರ್ಚೆ ರಾಜ್ಯಾದ್ಯಂತ ಜೋರಾಗಿದೆ, ಇದೇ ವಿಷಯಕ್ಕೆ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು ಏಪ್ರಿಲ್ 8ರಂದು ಸೋಮವಾರ ಬೆಂಗಳೂರಿನಲ್ಲಿ ಸ್ವತಃ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಪ್ರಕಟ ಮಾಡಲಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಐದನೇ ಬಾರಿಗೆ ಕಣಕ್ಕಿಳಿದಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆಯೋ ಅಥವಾ ಸ್ವಾಮೀಜಿಗಳ ಸ್ಪರ್ಧೆಯಿಂದ ತ್ರಿಕೋಣ ಹಣಾಹಣಿಯಾಗುವುದು ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಪ್ರಲ್ಹಾದ ಜೋಶಿ ಅವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಶಿರಹಟ್ಟಿ ಭಾವೈಕ್ಯತಾ ಸಂಸ್ಥಾನ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಭಕ್ತರ ಸಭೆ ನಡೆಸಿದ್ದು , ಅಂತಿಮ ನಿರ್ಧಾರ ಪ್ರಕಟಿಸಲು ಸೋಮವಾರ ಬೆಳಿಗ್ಗೆ 9.30 ಕ್ಕೆ ಬೆಂಗಳೂರಿನ ಹಳೇ ಬಳ್ಳಾರಿ ರಸ್ತೆಯ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಚಿಂತನ ಮಂಥನ ಸಭೆ ಕರೆದಿದ್ದಾರೆ.
ವಿವಿಧ ಮಠಾಧಿಪತಿಗಳ ಸಾನ್ನಿಧ್ಯದಲ್ಲಿ ನಡೆಯಲಿರುವ ಈ ಸಭೆಯ ನೇತೃತ್ವವನ್ನು ದಿಂಗಾಲೇಶ್ವರ ಸ್ವಾಮೀಜಿ ವಹಿಸಲಿದ್ದು, ಈಗಾಗಲೇ ಧಾರವಾಡದಲ್ಲಿ ನಡೆದ ಭಕ್ತರ ಸಭೆಯಲ್ಲಿ ಲೋಕಸಭಾ ಕಣಕ್ಕೆ ಇಳಿಯುವಂತೆ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ.
ಸೋಮವಾರದ ಸಭೆಯಲ್ಲಿ ಚರ್ಚೆ ನಡೆಸಿ ದಿಂಗಾಲೇಶ್ವರರು ತಮ್ಮ ಮುಂದಿನ ನಡೆ ಪ್ರಕಟಿಸಲಿದ್ದಾರೆ.
ಇಡೀ ಕ್ಷೇತ್ರದಾದ್ಯಂತ ಸ್ವಾಮೀಜಿ ಕಣಕ್ಕಿಳಿಯಲಿದ್ದಾರೆನ್ನುವ ಗುಸು ಗುಸು ವಿದ್ಯುತ್ನಂತೆ ಪ್ರವಹಿಸುತ್ತಿದೆ.
ಕಾಂಗ್ರೆಸ್ ಪಕ್ಷ ಸಹ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರನ್ನು ಸೆಳೆಯಲು ಮುಂದಾಗಿದೆ. ಈಗಾಗಲೇ ಟಿಕೆಟ್ ಘೋಷಿಸಿರುವ ವಿನೋದ ಅಸೂಟಿ ಅವರಿಗೆ ಬೇರೆ ಸ್ಥಾನಮಾನದ ಭರವಸೆ ನೀಡಿ, ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವ ಬಗ್ಗೆಯೂ ಕಾಂಗ್ರೆಸ್ ಚಿಂತನೆ ನಡೆಸಿದೆ ಎಂಬ ಗುಸುಗುಸು ಹಬ್ಬಿದೆ. ಆದರೆ, ಸ್ವಾಮೀಜಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾತು ಆಂತರಿಕ ವಲಯಗಳಿಂದ ಕೇಳಿ ಬರುತ್ತಿವೆ.
- ಲೋಕಸಭೆ ಚುನವಾಣೆ ಕಣ ಬದಲಾಗುವ ಸಾಧ್ಯತೆ
ತಮ್ಮ ಪ್ರವಚನ ಅಲ್ಲದೇ ಇತ್ತೀಚಿನ ಶಿರಹಟ್ಟಿ ಹಿರಿಯ ಗುರುಗಳ ಆನೆ ಅಂಬಾರಿ ತುಲಾಬಾರದಂತಹ ಐತಿಹಾಸಿಕ ಕಾರ್ಯಕ್ರಮಗಳ ಮೂಲಕ ದೊಡ್ಡ ಭಕ್ತ ಸಮೂಹ ಹೊಂದಿರುವ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಕಣಕ್ಕಿಳಿದಲ್ಲಿ ಕ್ಷೇತ್ರದ ಚುನಾವಣಾ ಚಿತ್ರಣವೇ ಬದಲಾಗುವ ಸಾದ್ಯತೆಗಳಿವೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ತಮ್ಮ ಹಿಂದೆ ಎಲ್ಲ ಪಕ್ಷದವರು ಇದ್ದಾರೆ ಎನ್ನುವ ಮೂಲಕ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಈಗಾಗಲೇ ಪ್ರಹ್ಲಾದ ಜೋಶಿಯವರ ಪ್ರಚಾರ ಬಿರುಸಿನಿಂದ ಸಾಗಿದೆಯಲ್ಲದೇ ಕಾಂಗ್ರೆಸ್ ಸಹ ಕಳೆದ ಮೂರ್ನಾಲ್ಕು ದಿನಗಳಿಂದ ಸಚಿವ ಲಾಡ್ ಉಸ್ತುವಾರಿಯಲ್ಲಿ ಪ್ರಚಾರ ಚುರುಕುಗೊಳಿಸಿದ್ದು ದಿಂಗಾಲೇಶ್ವರರ ನಿರ್ಧಾರದತ್ತ ಎಲ್ಲರ ದೃಷ್ಟಿ ನೆಟ್ಟಿದ್ದು ಅಂತಿಮ ನಿರ್ಧಾರವನ್ನು ಬೆಂಗಳೂರಲ್ಲೇ ಪ್ರಕಟಿಸುವುದಾಗಿ ದಿಂಗಾಲೇಶ್ವರರು ಹೇಳಿದ್ದರು.
Leave a Reply