ಗದಗ: ಗದಗ ಕಿಲ್ಲಾ ಚಂದ್ರಸಾಲಿಯಲ್ಲಿ ಪ್ರತಿ ವರ್ಷ ಪ್ರತಿಷ್ಠಾಪಿಸುತ್ತ ಬಂದಿರುವ ಕಾಮರತಿಗೆ 159 ವರ್ಷ ಪೂರ್ಣಗೊಳಿಸಿದ ಸಂಭ್ರಮ.
ಸ್ವಾತಂತ್ರ್ಯ ಪೂರ್ವದಲ್ಲಿ ಚಂದ್ರಸಾಲಿ ಭಾಗದಲ್ಲಿ ಬ್ರಿಟಿಷ್ ಅಧಿಕಾರಿಗಳ ಪೊಲೀಸ್ ಕಚೇರಿ (ಸ್ಟೇಷನ್) ಇದ್ದುದರಿಂದ ಈ ಭಾಗವನ್ನು ಕಚೇರಿ ಎಂದೂ, ಕಚೇರಿ ಕಾಮನೆಂದೂ ಆಗಿನ ತಹಶೀಲ್ದಾರ ಕಚೇರಿಯಿಂದ ಕಾಮನೋತ್ಸವ ಖರ್ಚು ವೆಚ್ಚಕ್ಕೆಂದು ಸರಕಾರಿ ಹಣ ನೀಡುತ್ತಿದ್ದರಿಂದ ಇಲ್ಲಿನ ಕಾಮಣ್ಣನನ್ನು ಸರಕಾರಿ ಕಾಮನೆಂದೂ ಕರೆಯಲಾಗುತ್ತಿದೆ ಎಂದು ಹಿರಿಯರು ಹೇಳುತ್ತಾರೆ.
25 ಕೆ.ಜಿ. ಬಂಗಾರ
ಸರಕಾರಿ ಕಾಮನೋತ್ಸವ ಸಂದರ್ಭದಲ್ಲಿ ಈ ಭಾಗದ ಜನರು ರತಿಗೆ ತಮ್ಮ ತಮ್ಮ ಮನೆಯಿಂದ ಚಿನ್ನಾಭರಣಗಳನ್ನು ಹಾಕಿ ಖುಷಿಯೊಂದಿಗೆ ಸಂತೃಪ್ತಿ ಪಡೆಯುತ್ತಾರೆ.ಮಕ್ಕಳಾಗದ ಮಹಿಳೆಯರು ತೊಟ್ಟಿಲು ಕಟ್ಟಿ ಮಕ್ಕಳ ಭಾಗ್ಯ ಪಡೆಯುವರೆಂಬ ನಂಬಿಕೆ ಹಾಗೂ ಮದುವೆಯಾಗದ ಯುವಕ ಯುವತಿಯರು ಅ ಕಂಕಣ ಹಾಗೂ ಬಾಸಿಂಗ ಕಟ್ಟಿ ಮದುವೆ ಆಗಿದ್ದಾರೆ ನಂಬಿಕೆ ಇರುವುದರಿಂದಲೇ ಇಲ್ಲಿನ ರತಿಗೆ ಭರ್ಜರಿ ಆಭರಣಗಳನ್ನು ಹಾಕಿ ಜನರು ಸಂಭ್ರಮಿಸುತ್ತಾರೆ.
ಕನಿಷ್ಠ ಸುಮಾರು 20 ರಿಂದ 25ಕೆ.ಜಿ ಯಷ್ಟು ಬಂಗಾರವನ್ನು ಇಂದಿಗೂ ರತಿಯ ಕೊರಳಿಗೆ ಗದಗ ಬೆಟಗೇರಿಯ ಅವಳಿ ನಗರದ ಜನತೆ ಹಾಕುತ್ತಾರೆ. ಕಳೆದ ವರ್ಷ 28ಕೆ.ಜಿಗೆ ಹೆಚ್ಚಿನ ಪ್ರಮಾಣದ ಚಿನ್ನಾಭರಣದಿಂದ ಅಲಂಕಾರ ಮಾಡಲಾಗಿತ್ತು ಹಾಗೂ ಈ ವರ್ಷ ವಿಶೇಷವಾಗಿ ಕಾಮಣ್ಣನಿಗೆ ರಾಡೋ ವಾಚ್ ಹಾಗೂ ಬೆಳ್ಳಿಯ ಸ್ಟಿಕ್ ಹಾಕಲಾಗುತ್ತಿದೆ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವ ನಿಮಿತ್ತ ಪ್ರತಿಷ್ಠಾಪನೆ ನಾಲ್ಕನೇ ದಿನ ಬೇರೆ ಬೇರೆ ಮನೆತನದವರು ತಮ್ಮ ಮನೆಯಲ್ಲಿನ ಚಿನ್ನಾಭರಣಗಳನ್ನು ಗುರುತು ಹಾಕಿ, ವಿಳಾಸ, ತೂಕದ ವಿವರದ ಚೀಟಿಯನ್ನು ಬರೆದು ಹಿರಿಯರ ಸಮಕ್ಷಮದಲ್ಲಿ ಒಪ್ಪಿಸುತ್ತಾರೆ. ಹಿರಿಯರ ಕಮೀಟಿ ಅದಕ್ಕೊಂದು ರಿಜಿಸ್ಟರ್‌ದಲ್ಲಿ ಸಂಪೂರ್ಣ ವಿವರ ಬರೆದು ಅದರ ಕ್ರಮ ಸಂಖ್ಯೆಯನ್ನು ಚೀಟಿಯಲ್ಲಿ ಬರೆದು ಚಿನ್ನಾಭರಣದ ಸರಕ್ಕೆ ಕಟ್ಟುವರು. ಕಾಮ ಪ್ರತಿಷ್ಠಾನ ಕಾಮನೋತ್ಸವ ಮಂಡಳಿಯ ಪದಾಧಿಕಾರಿಗಳು ಪೊಲೀಸರ ಉಸ್ತುವಾರಿಯಲ್ಲಿ ಸರ್ಪಗಾವಲಿಯಲ್ಲಿ ಹಗಲು ರಾತ್ರಿ ಕಾಯುತ್ತಾರೆ. ಈ ಸಲ ಹೆಚ್ಚಿನ ನಿಗಾ ಮತ್ತು ಭದ್ರತೆಯ ಹಿನ್ನಲೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ.
ಕಾಮ ರತಿಯರನ್ನು ಚಂದ್ರಸಾಲಿ ಕಿಲ್ಲಾದ ಓಣಿಯ ಮಧ್ಯದಲ್ಲಿ ವಿಶೇಷವಾದ ಮಂಟಪದಲ್ಲಿ ಹೊಳಿ ಹುಣ್ಣಿಮೆಯಂದು ಪ್ರತಿಷ್ಠಾಪಿಸಲಾಗುವದು. ಐದು ದಿನವೂ ವಿಶೇಷ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೊನೆಯ ದಿನ ಕಾಮ ರತಿಯನ್ನು ಮಂಟಪದಿಂದ ವಿಶೇಷವಾದ ಅಲಂಕೃತ ಚಕ್ಕಡಿಯಲ್ಲಿ ಕೂರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆಯಲ್ಲಿ ಕೂಡ ಉಡಿ ತುಂಬಾ ವ್ಯವಸ್ಥೆ ಮಾಡಲಾಗುತ್ತಿದೆ. ಕಾಮನೋತ್ಸವದ ಮೆರವಣಿಗೆ ಮುಗಿಯುತ್ತಿದ್ದಂತೆಯೇ ಕಾಮನೋತ್ಸವ ಸಮಿತಿಯು ಹಿರಿಯರ ಕಮೀಟಿಯೊಂದಿಗೆ ಸೇರಿಕೊಂಡು ಚಿನ್ನಾಭರಣಗಳನ್ನು ನೀಡಿದವರ ಮನೆ ಮನೆಗೆ ತಲುಪಿಸಿ ಜವಾಬ್ದಾರಿಯಿಂದ ಮುಕ್ತರಾಗುತ್ತಾರೆ. ಇಷ್ಟು ವರ್ಷದವರೆಗೂ ಚಿನ್ನಾಭರಣದ ವಿಷಯದಲ್ಲಿ ಯಾವುದೇ ರೀತಿಯ ಭಿನ್ನತೆ, ಅಪಸ್ವರ ಬಾರದಿರುವದು ಹಿರಿಯರ ಜವಾಬ್ದಾರಿ ಮತ್ತು ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿ ವಿಶ್ವಾಸದ ಪ್ರತೀಕವಾಗಿದೆ.
ಗುರುಹಿರಿಯರು ಯುವಕರು ಮಹಿಳೆಯರು ಕಿಲಾ ಓಣಿಯ ಸರ್ವ ಸಮಾಜ ಬಾಂಧವರು ಈ ಕಾಮನೋತ್ಸವವನ್ನು ಅತ್ಯಂತ ಅದ್ದೂರಿಯಿಂದ ಆಚರಿಸಿಕೊಂಡು ಬಂದ ಸಂಪ್ರದಾಯವಿದೆ.
ಪ್ರತಿ ವರ್ಷ ಕಾಮನೋತ್ಸವವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಲು ಒಂದು ತಿಂಗಳು ಮೊದಲೇ ಪೂರ್ವ ಸಿದ್ದತೆಗಳು ಭರದಿಂದ ನಡೆದಿರುತ್ತವೆ ಅದಕ್ಕಾಗಿ ಹಿರಿಯರು ಯುವಕರನ್ನು ಸಂಘಟಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ಗುರುತರವಾದ ಜವಾಬ್ದಾರಿಯನ್ನು ವಹಿಸುತ್ತಾರೆ.
ಕೋಟ್
ರಂಗಪಂಚಮಿಯಂದು ರಥಿಮನ್ಮಥರ ಮೆರವಣಿಗೆಯನ್ನು ನೋಡುವುದೇ ಒಂದು ವಿಶೇಷ ಸಂಭ್ರಮ. ಮೆರವಣಿಗೆಯು ಸರ್ಪಗಾವಲಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಅಂದು ರಗ್‌ಹಲಗೆ, ಕರಡಿ ಮಜಲು, ಡೊಳ್ಳು ಕುಣಿತ, ಯುವಕ ಯುವತಿಯರ ಸಂಭ್ರಮ ಸಡಗರ ನೋಡುವಂತಿರುತ್ತದೆ ಪ್ರತಿವರ್ಷ ಅಂತ ಈ ವರ್ಷವೂ ಸಹ ನಗರಸಭೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯಿಂದ ಸಹಕಾರ ದೊರೆಯುತ್ತದೆ ಹಾಗೂ ಈಗಾಗಲೇ ಕಾಮರತಿ ಪ್ರತಿಷ್ಠಾಪನೆಗಾಗಿದ್ದು ಪ್ರತಿದಿನವೂ ಭಕ್ತಾದಿಗಳಿಗೆ ಸರತಿ ಸಾಲಿನಲ್ಲಿ ನಿಂತು ಉಡಿ ತುಂಬುವ ವ್ಯವಸ್ಥೆ ಮಾಡಲಾಗಿದೆ ಎಂದು ಚಂದ್ರಸಾಲಿ ಓಣಿಯ ಹಿರಿಯರಾದ ಸುಧೀರ ಕಾಟಿಗರ ತಿಳಿಸಿದ್ದಾರೆ
Leave a Reply