ಗದಗ: ಜಿಲ್ಲೆಯಾದ್ಯಂತ ಆಯುಕ್ತಾಲಯದ ನಿರ್ದೇಶನದಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ “ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ, ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ” ಅಭಿಯಾನವನ್ನು ಮಾರ್ಚ್ 15 ರಿಂದ ಮೇ ಮಾಹೆಯ ಅಂತ್ಯದವರೆಗೂ ಹಮ್ಮಿಕೊಂಡಿದ್ದು ಗ್ರಾಮೀಣರು ಇದರ ಸದುಪಯೋಗ ಪಡಿಸಿಕೊಳ್ಳಲು ಜಿಪಂ ಸಿಇಓ ಭರತ್ ಎಸ್ ಅವರು ಮನವಿ ಮಾಡಿದ್ದಾರೆ.
ನಮ್ಮ ಜಿಲ್ಲೆಯ ಕೆಲವು ಗ್ರಾಮಗಳಿಂದ ಸಾಮಾನ್ಯವಾಗಿ ಪ್ರತಿ ವರ್ಷ ಬೇಸಿಗೆ ಬಂತೆಂದರೆ ಊರನ್ನು ಬಿಟ್ಟು ನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ವಲಸೆ ಹೋಗುವುದು ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ ಹಾಗಾಗಿ ಉದ್ಯೋಗ ಚೀಟಿ ಹೊಂದಿರುವ ಎಲ್ಲಾ ಕುಟುಂಬಗಳು ಗ್ರಾಮ ಪಂಚಾಯತಿ ವತಿಯಿಂದ ಹಮ್ಮಿಕೊಂಡಿರುವ ಈ ಅಭಿಯಾನದಲ್ಲಿ ಸ್ಥಳೀಯವಾಗಿ ಉದ್ಯೋಗ ಪಡೆದು ಯೋಜನೆಯ ಸೌಲಭ್ಯವನ್ನು ಪಡೆಯಬೇಕು.
ಈ ಅಭಿಯಾನದ ಮೂಲ ಉದ್ದೇಶವೇ ಬೇಸಿಗೆ ವಲಸೆಯನ್ನು ನಿಯಂತ್ರಣ ಮಾಡುವುದಾಗಿದ್ದು ಈಗಾಗಲೇ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಕಾಯಕ ಮಿತ್ರ /ತಾಂಡಾ ರೋಜಗಾರ ಮಿತ್ರ ಹಾಗೂ ಕ್ರಿಯಾಶೀಲ ಕಾಯಕ ಬಂಧುಗಳಿಂದ ಉದ್ಯೋಗ ಚೀಟಿದಾರರ ಕುಟುಂಬಗಳ ಮನೆ -ಮನೆ ಭೇಟಿ ಕಾರ್ಯ ನಡೆಯುತ್ತಿದ್ದು ಏಪ್ರೀಲ್ 1 ರಿಂದಲೇ ಸ್ಥಳೀಯವಾಗಿ ಕೆಲಸ ನೀಡಲಾಗುತ್ತಿದ್ದು, ನಮೂನೆ 6ರಲ್ಲಿ ಕೂಲಿ ಬೇಡಿಕೆ ಪಡೆಯುವಂತೆ ನಿರ್ದೇಶನ ನೀಡಲಾಗಿದೆ, ಜಿಲ್ಲೆಯು ಕಳೆದ 2023-24 ನೇ ಸಾಲಿನಲ್ಲಿ ಆಯುಕ್ತಾಲಯದ ಗುರಿಯನ್ನು ವರ್ಷಕ್ಕಿಂತ ಮೊದಲೇ ಸಾಧಿಸಲಾಗಿದ್ದು ಈ ಪ್ರಸಕ್ತ ವರ್ಷವು ಸಹ ಬೇಗನೆ ಕೆಲಸ ನೀಡುವ ಮೂಲಕ ಗುಳೆ ತಪ್ಪಿಸಿ ಸ್ಥಳಿಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕೂಲಿಕಾರರಿಗೆ ಉದ್ಯೋಗ ಒದಗಿಸುವಂತೆ ತಳಮಟ್ಟದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.
ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಕೆಲಸದ ಸ್ಥಳಗಳಲ್ಲಿ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ, ನೆರಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು ಹಾಗೂ ಕೂಲಿಕಾರರು ಕೆಲಸದ ಸ್ಥಳದಲ್ಲಿ ಮಕ್ಕಳನ್ನು ಕರೆತರಬಾರದು ಅದಕ್ಕಾಗಿ ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ನಮ್ಮ ಗ್ರಾಮ ಪಂಚಾಯತಿಯಿಂದ ಕೂಸಿನ ಮನೆ ಆರಂಭಮಾಡಿದ್ದು,ತಾವುಗಳು ತಮ್ಮ ಮಕ್ಕಳನ್ನು ಅಲ್ಲಿಯೇ ಬಿಟ್ಟು ಕೆಲಸಕ್ಕೆ ಹೋಗಲು ಅವಕಾಶವಿದ್ದು ಇದರಿಂದ ಪಾಲಕರಿಬ್ಬರು ಯೋಜನೆಯಡಿ ಕೆಲಸಕ್ಕೆ ತೆರಳಿದಾಗ ಮಕ್ಕಳ ಲಾಲನೆ ಪಾಲನೆ ಕೊರತೆ ನೀಗಿದಂತಾಗಿದೆ ಇದರಿಂದ ಯೋಜನೆಯಡಿ ಹೆಚ್ಚಿನ ಜನರು ಪಾಲ್ಗೊಂಡು ಯೋಜನೆ ಸೌಲಭ್ಯ ಪಡೆದು ಕೊಳ್ಳುವಂತೆ ಕೋರಿಕೆ.
Leave a Reply