ಗದಗ: ಕೆ.ಎಚ್.ಪಾಟೀಲ ಕನ್ನಡ ನಾಡು ಕಂಡ ಬಲು ಅಪರೂಪದ, ವರ್ಣರಂಜಿತ, ವ್ಯಕ್ತಿತ್ವದ, ಅಂಜಿಕೆ ಅರಿಯದ ಧೀಮಂತ ರಾಜಕಾರಣಿ.
ಕೆ.ಎಚ್.ಪಾಟೀಲರದ್ದು ದಿಟ್ಟ ಹೋರಾಟಗಳಿಂದ ಕೂಡಿದ ಸಂಘರ್ಷಗಳಿಂದ ಕೂಡಿದ ಬದುಕು. ಬಾಲ್ಯದಿಂದಲೂ ಅವರಿಗೆ ಜನಹಿತವೇ ಪ್ರಧಾನ ಸಮಷ್ಟಿಗಾಗಿ ಬದುಕುವುದೇ ಅವರ ಜೀವನದ ಧ್ಯೇಯ “ನೀನು ಮಾಡುವ ಕೆಲಸಗಳಿಂದ ಜನಹಿತ ಸಾಧಿತವಾಗುತ್ತಿದ್ದರೆ ಭಗವಂತನಿಗೂ ಅಂಜಬೇಡ” ಎಂದು ಸಾರಿ “ಜನಹಿತವೇ ಜನಾರ್ಧನನ ಸೇವೆ” ಎಂದು ಬಾಳಿದರು.
ಮನುಷ್ಯ ಎಷ್ಟರ ಮಟ್ಟಿಗೆ ಒಳ್ಳೆಯದಕ್ಕಾಗಿ, ಸರ್ವರ ಹಿತಕ್ಕಾಗಿ, ಸಮಷ್ಟ ಕಲ್ಯಾಣಕ್ಕಾಗಿ ದುಡಿಯುತ್ತಾನೋ ಅಷ್ಟರ ಮಟ್ಟಿಗೆ ಆತನು ದೊಡ್ಡವನಾಗುತ್ತಾನೆ. ಕೆ.ಎಚ್.ಪಾಟೀಲರು ವಿರೋಧಿಗಳು ಸಹ ಬೆಕ್ಕಸ ಬೆರಗಾಗುವಂತೆ ಕೆಲಸ ಮಾಡಿದ್ದಾರೆ. ಕೆಲಸದ ಕೈಯಲ್ಲಿ ಅವರೆಂದೂ ಸೋತವರಲ್ಲ. ಸೋಲು ಎಂಬ ಪದ ಸೋಲಿಸಿದ ಧೈರ್ಯಶಾಲಿ. ಸದಾ ಸಂಕಷ್ಟಗಳನ್ನು ಎದುರಿಸಿದ ಅವರ ಎದುಗಾರಿಕೆ ಅನನ್ಯ ಅಸಾದೃಶ್ಯ.
ಕೆ.ಎಚ್.ಪಾಟೀಲ ವ್ಯವಹಾರಿಕ ಅರ್ಥದಲ್ಲಿ ರಾಜಕಾರಣಿಯಾಗಿರಲಿಲ್ಲ. ಅವರೊಬ್ಬ ದಾರ್ಶನಿಕ ಧುರೀಣರು. ತಾವು ನಂಬಿದ ಸಿದ್ದಾಂತವನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ವೈಯಕ್ತಿಕ ಲಾಭಹಾನಿ ಲೆಕ್ಕಾಚಾರ ಮಾಡಿದವರಲ್ಲ.
ಕೆ.ಎಚ್.ಪಾಟೀಲರ ಗುರಿ, ರೈತರ ಹಿತ ಕಾಪಾಡುವುದಾಗಿತ್ತು. ರೈತರು ಎಲ್ಲ ರೀತಿಯ ಶೋಷಣೆಯಿಂದ ಮುಕ್ತಗೊಳಿಸುವುದಾಗಿದ್ದಿತು. ರೈತಾಪಿ ವರ್ಗದ ಜನರನ್ನು ವಿದ್ಯಾವಂತವರನ್ನಾಗಿ ಮಾಡುವುದಲ್ಲ, ಸ್ಫರ್ಧಾತ್ಮಕ ಪ್ರಪಂಚದಲ್ಲಿ ಹೋರಾಟಕ್ಕೆ ಸಿದ್ದಪಡಿಸುವುರಾಗಿದ್ದಿತು. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅವರನ್ನ ಸಶಕ್ತರನ್ನಾಗಿ ಮಾಡುವುದರ ಜೊತೆಗೆ ಆರೋಗ್ಯ ಶಾಲಿ ಗ್ರಾಮೀಣ ಸಮಾಜ ಕಟ್ಟುವುದೇ ಅವರ ಕನಸಾಗಿದ್ದಿತು. ಆ ಕನಸು ಸಾಕಾರಗೊಳಿಸಲು ಅವರು ನಿರಂತರ ಪ್ರಯತ್ನಶೀಲರಾಗಿದ್ದರು.
ಕೆ.ಎಚ್.ಪಾಟೀಲ ಕಾಯಕಯೋಗಿ ಜೀವನ ನಡೆಸಿದರು. ಪ್ರಪಂಚದ ೧೦೦ ದೇಶಗಳ ಸದಸ್ಯತ್ವದ ಸಹಕಾರಿ ಸಂಘಟನೆ ಅಧ್ಯಕ್ಷಗಿರಿ ಅವರಿಗೆ ದೊಡ್ಡದಾಗಿರಲಿಲ್ಲ. ರಾಜ್ಯ, ರಾಷ್ಟ್ರಮಟ್ಟದ ಸಹಕಾರಿ ಸಂಘಟನೆಗಳ ಮುಖ್ಯಸ್ಥರಾಗಿ ಸಹಕಾರ ರತ್ನರಾದರೂ ಅವರು ಮಾತ್ರ ಅಪ್ಪಟ ಹಳ್ಳಿಯ ವ್ಯಕ್ತಿಯಾಗಿದ್ದರು. ಹಳ್ಳಿಗರ ನಿಷ್ಠುರತೆ, ಸತ್ಯ ಸಂಧತೆ, ಸರಳತೆ ಸಜ್ಜನಿಕೆ, ಎದೆಗುಂದದೆ ಮುನ್ನುಗ್ಗುವ ಸ್ವಭಾವ ಲಾಭಹಾನಿಯ ಲೆಕ್ಕಾಚಾರ ಹಾಕದ ಮುಗ್ದತೆ, ಪ್ರಸಂಗಾವಧಾನ, ಅವರ ಜೀವನದಲ್ಲಿ ಹಾಸು ಹೊಕ್ಕಾಗಿದ್ದವು. “ಭಯಗೊಂಡರೆ ಭಯವಿಲ್ಲ” ಎನ್ನುತ್ತಿದ್ದ ಕೆ.ಎಚ್.ಪಾಟೀಲ “ಅಂಜಿ ಅಂಜಿ ದಿನವೂ ಸಾಯುವುದಕ್ಕಿಂತ ದೈರ್ಯದಿಂದ ಹೋರಾಡಿ ಬದುಕಬೇಕು” ಎಂದು ಹೇಳುತ್ತಿದ್ದರಷ್ಟೇ ಅಲ್ಲಿ ಅದರಂತೆಯೇ ಬಾಳಿದರು.
ಕೆ.ಎಚ್.ಪಾಟೀಲರು, ಆಡಳಿತದಲ್ಲಿ ನಿಪುಣರು, ಸಂಘಟನೆಯಲ್ಲಿ ಚತುರರು, ದಾರ್ಶನಿಕ ಚಿಂತಕರು. ಸಚಿವರಾಗಿ ಪಕ್ಷದ ಮುಖ್ಯಸ್ಥರಾಗಿ, ಹಿರಿಯ ಸಹಕಾರಿಯಾಗಿ, ಇದನ್ನು ಅವರು ಸಾಬೀತು ಮಾಡಿದರು. ತಮಗೆ ಅನ್ಯಾಯವಾಗಿದೆ. ಎಂದೆನಿಸಿದಾಗ, ತಮ್ಮ ಆತ್ಮಗೌರವ ಕಾಪಾಡಿಕೊಳ್ಳಲು ತಮ್ಮ ಸಮರ ತಾವೇ ಏಕಾಂಗಿಯಾಗಿ ನಡೆಸಿದ ಛಲವಂತರು.
೧೯೫೪ರಲ್ಲಿ ಎ.ಐ.ಸಿ.ಸಿ. ಸದಸ್ಯರಾಗಿ ಆವಡಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು, ಕೆ.ಎಚ್.ಪಾಟೀಲರು ಕೆ.ಪಿ.ಸಿ.ಸಿ. ಅಧ್ಯಕ್ಷತೆ ಚಲಾವಣೆಯಲ್ಲಿ ನಿಜಲಿಂಗಪ್ಪ ವಿರೋಧಿ ಬಣದಲ್ಲಿದ್ದರು. ಇದು ಅವರಿಗೆ ರಾಜಕೀಯವಾಗಿ ಬಹಳ ಅನಾನುಕೂಲತೆಗಳನ್ನು ಸೃಷ್ಟಿಸಿದರೂ ಅದನ್ನ ಲೆಕ್ಕಿಸದೇ ಮುನ್ನಡೆದರು.
ರೈತ ಪಕ್ಷಪಾತಿಯಾಗಿದ್ದ ಕೆ.ಎಚ್.ಪಾಟೀಲರು ದಿ.ಗದಗ ಕೋ-ಆಪ್ ಕಾಟನ್ ಸೇಲ್ ಸೊಸೈಟಿಯನ್ನು ನೈಜವಾದ ಅರ್ಥದಲ್ಲಿ ರೈತಪರ ಸಂಸ್ಥೆಯನ್ನಾಗಿ ಕಟ್ಟಿದರು. ಎ.ಪಿ.ಎಮ್.ಸಿ. ಚೇರಮನ್ನರಾಗಿ ಶೋಷಣೆರಹಿತ ಮಾರಾಟ ವ್ಯವಸ್ಥೆ ರೂಪಿಸಲು ಭದ್ರ ಬುನಾದಿ ಹಾಕಿದರು. ಗ್ರಾಮೀಣ ಉಗ್ರಾಣಗಳನ್ನು ರೈತರ ಲಕ್ಷ್ಮಿ ಮಂದಿರಗಳೆಂದು ಸಾರಿ ತಮ್ಮ ಪರಿಸರದ ಹಳ್ಳಿಗಳಲ್ಲಿ ಗ್ರಾಮೀಣ ಗುದಾಮುಗಳನ್ನು ಕಟ್ಟಿದರು. ಸಾಹಿತ್ಯಾಭಿಮಾನಿಯಾಗಿ ೧೯೬೧ರಲ್ಲಿ ಗದಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು. ನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಬೇಕೆಂದು ೧೯೭೩ರಲ್ಲಿ ಅದನ್ನು ಸಾಧಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದರು.
ಕೆ.ಎಚ್.ಪಾಟೀಲರು ಎದುರು ಹಾಕಿಕೊಂಡಿದ್ದು ಬಲಿಷ್ಠರನ್ನು, ನಿಜಲಿಂಗಪ್ಪ, ದೇವರಾಜ ಅರಸ, ಇಂದಿರಾಗಾಂಧಿ ಅವರನ್ನು ಡಿಕ್ಕಿಹೊಡೆದು ರಾಜಕೀಯ ಮಾಡಿದರು. ಧನಬಲವುಳ್ಳವರ ವಿರೋಧ ಕಟ್ಟಿಕೊಂಡು, ಬಡವರನ್ನು, ದುರ್ಬಲರನ್ನು, ಧ್ವನಿ ಇಲ್ಲದವರನ್ನು ಬೆನ್ನಿಗೆ ಹಾಕಿಕೊಂಡು ಹೋರಾಡಿದರು.
ವಿಶಾಲ ಕರ್ನಾಟಕ ದಿನಪತ್ರಿಕೆ, ನಂದಾದೀಪ ವಾರಪತ್ರಿಕೆ ಪ್ರಾರಂಭಿಸಿದ, ಲೇಖಕರಾಗಿ, ಚಿಂತಕರಾಗಿ ಲೋಕಶಿಕ್ಷಣ ಕೆಲಸ ಮಾಡಿದ ಕೆ.ಎಚ್.ಪಾಟೀಲರ ತ್ವರಿತಗತಿಯಿಂದ ಕೆಲಸ ಮಾಡುವ ಕಾರ್ಯಶೈಲಿಯಿಂದ “ಬುಲಡೋಜರ” ಖ್ಯಾತಿ ಗಳಿಸಿದರು. ತಮ್ಮ ಸಂಘಟನಾ ಚಾತುರ್ಯ ಹಾಗೂ ಸಹಕಾರದ ಬಗೆಗಿನ ಅವರ ಬದ್ಧತೆಯ ಫಲವಾಗಿ ಹುಲಕೋಟಿ ಪರಿಸರದಲ್ಲಿ “ಸಹಕಾರದ ಓಯಾಸಿಸ್” ಸಹಕಾರ ಕಾಶಿ ಕಟ್ಟಿ ಸಹಕಾರ ಭೀಷ್ಮರೆನಿಸಿದರು.
ಕೆ.ಎಚ್.ಪಾಟೀಲರ ಉಸಿರೇ ಸಹಕಾರ, ರೈತನೇ ಹೃದಯ, ಗ್ರಾಮ ಹಾಗೂ ಕೃಷಿ ಅವರ ಎರಡು ಪುಪ್ಪಸಗಳು. ಕೈಗಾರಿಕೆ ಹಾಗೂ ಶಿಕ್ಷಣ ಅವರ ಕಣ್ಣುಗಳು. ರಚನಾತ್ಮಕ ಕೆಲಸಗಳೇ ಕಾರ್ಯಗಳು, ಅವಿಶ್ರಾಂತ ಶ್ರಮ ಅವರ ಬಲಿಷ್ಠ ಬಾಹುಗಳು, ಅವರ ನಿಲುವು ಛಲದ್ದು, ಅವರ ಬದುಕು ಹೋರಾಟದ್ದು, ಶೋಷಣೆರಹಿತ ಸಮಾಜ ಕಟ್ಟುವ ಸುಂದರ ಕನಸುಗಾರ. ಅವರಿಗೆ ರಾಜಕೀಯ ಒಂದು ಸಾಧನವಾಗಿದ್ದಿತೇ ಹೊರತು ಅದೇ ಗುರಿಯಾಗಿರಲಿಲ್ಲ. ಅವರ ನರನಾಡಿಗಳಲ್ಲಿ ಹರಿದಾಡಿದ್ದು ಮಾನವೀಯ ಅನುಕಂಪ. ಅದಕ್ಕಾಗಿಯೇ ಅವರು ಬಲು ಅಪರೂಪದ ರಾಜಕಾರಣಿ ಭಯ ಗೆದ್ದು ಬದುಕಿದ ಎಂಟೆದೆಯ ಬಂಟ.
Leave a Reply