
ಬೆಂಗಳೂರು: ಕರ್ನಾಟಕ ಡಿಕೆಶಿ ಅವರ ರಿಪಬ್ಲಿಕ್ ಅಲ್ಲ. ಅಧಿಕಾರ ಸಿಕ್ಕಿದೆ ಎಂಬ ಕಾರಣಕ್ಕಾಗಿ ಅವರ ತಲೆ ನಿಲ್ಲುತ್ತಿಲ್ಲ, ಕಾಲಚಕ್ರ ತಿರುಗ್ತಾನೆ ಇರುತ್ತೆ, ಮೇಲಿರುವ ಚಕ್ರ ಕೆಳಗೆ ಬಂದೇ ಬರುತ್ತೆ ಅದಕ್ಕೆ ಸ್ವಲ್ಪ ದಿನ ಕಾಯಬೇಕಷ್ಟೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಉತ್ತರಿಸಿರುವ ಅವರು, ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ, ಪ್ರತಿಪಕ್ಷ ಇರುತ್ತವೆ. ಡಿಕೆಶಿ ಅವರಿಗೆ ಇದು ಗೊತ್ತಿಲ್ಲದಷ್ಟು ಅಜ್ಞಾನವೇ? ಪ್ರಶ್ನೆ ಮಾಡಬೇಕು ಎಂತಲೇ ಜನ ನನ್ನನ್ನು ವಿರೋಧಪಕ್ಷದಲ್ಲಿ ಕೂರಿಸಿದ್ದಾರೆ ಎಂದು ಹೇಳಿದ್ದಾರೆ.
ಡೂಪ್ಲಿಕೇಟ್ ಸಿಎಂ ಬಹಳ ಆತುರ, ಆವೇಶದಲ್ಲಿದ್ದಾರೆ. ಅತಿಯಾದ ಆತುರ, ಆವೇಶ ಆರೋಗ್ಯಕ್ಕೆ ಹಾನಿ ಉಂಟು ಮಾಡಬಹುದು! ಈ ಎಚ್ಚರಿಕೆ ನೆನಪಿದ್ದರೆ ಒಳ್ಳೆಯದು. ಅಧಿಕಾರದ ಪಿತ್ತ ನೆತ್ತಿಗೇರಿ ಮಿದುಳು ಕೆಲಸ ಮಾಡದಿದ್ದರೆ ನಾಲಿಗೆ ಹೀಗೆ ಮಾತನಾಡುತ್ತದೆ. ಅಚ್ಚರಿಯೇನೂ ಇಲ್ಲ ಎಂದು ಕಟಿಕಿಯಾಡಿದ್ದಾರೆ.
ಪಂಚರತ್ನಗಳು ರಾಜ್ಯದ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ರೂಪಿಸಿದ್ದ ಪಂಚಸೂತ್ರಗಳು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜನರನ್ನು ಶಾಶ್ವತವಾಗಿ ಆರ್ಥಿಕ ದುರ್ಬಲರನ್ನಾಗಿಸುವ ತಾತ್ಕಾಲಿಕ ತಂತ್ರಗಾರಿಕೆ. 75 ವರ್ಷಗಳಿಂದಲೂ ಕಾಂಗ್ರೆಸ್ ಇದನ್ನೇ ಮಾಡಿದೆ ಅಲ್ಲವೇ. ಜನರ ಕೈಲಿ ಭಿಕ್ಷಾಪಾತ್ರೆ ಇಟ್ಟರೆ ವೋಟಿನ ಜೋಳಿಗೆ ಭರ್ತಿ ಆಗುತ್ತದೆ ಎನ್ನುವ ದುಷ್ಟಬುದ್ಧಿ ಕಾಂಗ್ರೆಸ್ಸಿನದ್ದು. ಜನರು ಸ್ವಾವಲಂಭಿಗಳಾಗಿ ಗೌರವಯುತ ಜೀವನ ನಡೆಸಬೇಕು ಎನ್ನುವ ಹಂಬಲ ನನ್ನದಾಗಿತ್ತು ಎಂದರು.
ಡೂಪ್ಲಿಕೇಟ್ ಸಿಎಂ ಬೆಂಬಲಿಗ ಸಚಿವರು ಇತ್ತೀಚೆಗೆ ಹೇಳಿದ್ದಾರಲ್ಲ, ಎಲೆಕ್ಷನ್ ಗೆಲ್ಲಬೇಕಾದರೆ ಗ್ಯಾರಂಟಿ ಯೋಜನೆಗಳಂಥ ಕಣ್ಣೊರಿಸುವ ತಂತ್ರ ಮಾಡಲೇಬೇಲು ಎಂದು. ಗ್ಯಾರಂಟಿಗಳು ಚೀಫ್ ಗಿಮಿಕ್ ಎನ್ನುವ ಆ ಸಚಿವರ ಮಾತಿಗೆ ನನ್ನ ಸಹಮತವಿದೆ ಎಂದು ಕುಮಾರಸ್ವಾಮಿ ಲೇವಡಿ ನೀಡಿದ್ದಾರೆ.