ಗದಗ: ಕರ್ನಾಟಕ ನಾಮಕರಣ ಹೋರಾಟದಲ್ಲಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಕವಿಕುಮಾರವ್ಯಾಸರು 14-15ನೇ ಶತಮಾನದಲ್ಲಿಯೇ ತನ್ನ ಮಹಾ ಕಾವ್ಯಕ್ಕೆ ಕರ್ನಾಟಕ ಕಥಾಮಂಜರಿ ಎಂದು ಹೆಸರಿಸಿದ್ದಾರೆ. ಕನ್ನಡ ಭಾಷಿಕರ ಏಕೀಕರಣಕ್ಕೆ ದೀರ್ಘವಾದ ರೋಚಕ ಇತಿಹಾಸವಿರುವಂತೆ ಕರ್ನಾಟಕ ನಾಮಕರಣಕ್ಕೆ ಭವ್ಯ ಇತಿಹಾಸವಿದೆ. ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗದಲ್ಲಿ ಬುಧವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕರ್ನಾಟಕ ನಾಮಕರಣದಲ್ಲಿ ಅವಿಸ್ಮರಣೀಯರಾದವರು ಅಂದಾನಪ್ಪ ದೊಡ್ಡಮೇಟಿ, ಹಳ್ಳಿಕೇರಿ ಗುದ್ಲೆಪ್ಪ, ಕೆ.ಎಫ್.ಪಾಟೀಲ, ವೀರಪ್ಪ ಬಸರೀಗಿಡದ, ಎನ್.ಎಸ್.ಸುಬ್ಬರಾಯರು, ಬೆಳ್ಳಾವೆ ವೆಂಕಟನಾರಾಯಣಪ್ಪರವರು, ದಿವಾಕರ ರಂಗರಾಯರು, ಮುದವೀಡು ಕೃಷ್ಣರಾಯರು, ಚಂದ್ರಶೇಖರ ಶಾಸ್ತ್ರಿಗಳು, ಕೃಷ್ಣ ಶಾಸ್ತ್ರಿಗಳು, ದ.ರಾ.ಬೇಂದ್ರೆ, ಶಿ.ಶಿ.ಬಸವನಾಳರು, ಟಿ.ಪಿ.ಕೈಲಾಸಂ, ಸಿ.ಕೆ.ವೆಂಕಟರಾಮಯ್ಯ, ತಿ.ತಾ.ಶರ್ಮಾ, ಉತ್ತಂಗಿ ಚನ್ನಬಸಪ್ಪ, ಎಂ.ಆರ್.ಶ್ರೀನಿವಾಸಮೂರ್ತಿ, ಗೋವಿಂದಪೈ, ನಂದೀಮಠ, ಕುವೆಂಪು, ರಂ.ಶ್ರೀ.ಮುಗಳಿ, ಬಿ.ಎಂ.ಶ್ರೀ, ಅ.ನ.ಕೃಷ್ಣರಾಯರು, ವ್ಹಿ.ಕೆ.ಗೋಕಾಕ, ದೇ.ಜವರೇಗೌಡ ಮತ್ತಿತರ ಮಹನೀಯರು ನಾಮಕರಣದ ಸಂದರ್ಭದಲ್ಲಿ ಅಮೂಲ್ಯ ಪಾತ್ರ ನಿರ್ವಹಿಸಿದ್ದರು ಎಂದು ಹೇಳಿದರು.








1961ರಲ್ಲಿ ಗದಗನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಕೆ.ಜಿ.ಕುಂದಣಗಾರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಮ್ಮೆಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಎಚ್.ಪಾಟೀಲ ಅವರು ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ನಿರ್ಣಯವನ್ನು ಮಂಡಿಸಿದರು ಹಾಗೂ ಅದು ಸರ್ವಾನುಮತದಿಂದ ಅಂಗೀಕಾರವಾಯಿತು ಎಂದರು. 1973ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಡಿ. ದೇವರಾಜ ಅರಸ, ವಿಧಾನ ಪರಿಷತ್ತಿನಲ್ಲಿ ಕೃಷಿ ಮಂತ್ರಿ ಕೆ.ಎಚ್.ಪಾಟೀಲ ಅವರು ಕರ್ನಾಟಕ ನಾಮಕರಣ ನಿರ್ಣಯ ಮಂಡಿಸಿದರು. ಬೆಂಗಳೂರು-ಹಂಪಿ ಗದಗದಲ್ಲಿ ಅದ್ದೂರಿಯ ನಾಮಕರಣೋತ್ಸವ ಸಮಾರಂಭಗಳು ಜರುಗಿದವು. ಗದುಗಿನ ವೀರನಾರಾಯಣ, ಬೇಲೂರಿನ ಚನ್ನಕೇಶವ, ಮೈಸೂರಿನ ತಾಯಿ ಚಾಮುಂಡಿ, ಕಲಬುರಗಿಯ ಬಂದೇನವಾಜ ಮತ್ತು ವಿಜಯಪುರದ ಗೋಳಗುಮ್ಮಟ, ಆನಂದನವನವೆಂದು ಕರೆಯಿಸಿಕೊಳ್ಳುವ ಕರಾವಳಿ, ಮುಂತಾದ ಐತಿಹಾಸಿಕ ಪ್ರದೇಶಗಳು ಕನ್ನಡನಾಡಿನ ಹಿರಿಮೆ-ಗರಿಮೆಯನ್ನು ಸಾರುತ್ತಾ ಕನ್ನಡ ನಾಡನ್ನು ಅತ್ಯಂತ ಶ್ರೀಮಂತಗೊಳಿಸಿ, ಕನ್ನಡ ತಾಯಿಯನ್ನು ಮತ್ತಷ್ಟು ಸುಂದರಗೊಳಿಸಿವೆ ಎಂದರು.
ಭಿನ್ನ ಭಿನ್ನ ಆಡಳಿತದಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕ ಪ್ರದೇಶವನ್ನು ಒಂದೇ ಆಡಳಿತದಲ್ಲಿ ತರುವ ತನ್ಮೂಲಕ ಕನ್ನಡತನ ಬೆಳೆಸಲು ನೆರವಾಗುವ ಏಕೀಕರಣ ಪರಿಕಲ್ಪನೆಯನ್ನು ಹಾಗೂ ಚಿಂತನೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಹುಟ್ಟು ಹಾಕಲಾಗಿತ್ತು. ಕನ್ನಡದ ಅನನ್ಯತೆ, ಅಸ್ಮಿತೆ ಕಂಡುಕೊಳ್ಳಲು ಏಕೀಕರಣ ಒಂದು ಪ್ರಬಲ ಸಾಧನೆವೆಂಬುದನ್ನು ಮನಗಂಡಿದ್ದ ನಮ್ಮ ಹಿರಿಯರು ರಾಷ್ಟ್ರೀಯ ಚಳವಳಿ ಹಾಗೂ ಏಕೀಕರಣ ಧಾರೆಯು ಜೊತೆಯಾಗಿ ಸಾಗಿದ್ದವು. ಸ್ವಾತಂತ್ರ ಪೂರ್ವದಲ್ಲಿ ಮೊಳಕೆಯೊಡೆದ ಚೆಲುವ ಕನ್ನಡ ನಾಡಿನ ಕನಸು ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಸಾಕಾರಗೊಂಡಿದ್ದು, ಕನ್ನಡಿಗರ ಭಾವನೆಗಳನ್ನು ಬೆಸೆದು ಹೆಮ್ಮರವಾಗಿ ಬೆಳೆದಿದೆ ಎಂದರು.
ನಾಮಕರಣ ಮಹೋತ್ಸವ ನಡೆದು ಇದೀಗ 50 ವಸಂತಗಳು ತುಂಬಿವೆ. ಈ ಅವಧಿಯಲ್ಲಿ ಕೃಷ್ಣ, ಕಾವೇರಿ, ಭೀಮೆ, ತುಂಗೆ, ಭದ್ರೆ, ತುಂಗಭದ್ರೆ, ಮಲಪ್ರಭೆ, ಘಟಪ್ರಭೆ, ಗೋದಾವರಿ ನದಿಗಳಲ್ಲಿ ಅಪಾರವಾದ ನೀರು ಹರಿದಿದೆ. ಕರ್ನಾಟಕ ಅದ್ಬುತವಾಗಿ ಅಭಿವೃದ್ಧಿ ಸಾಧಿಸಿದೆ. ಅಭಿವೃದ್ಧಿಯ ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅನೇಕ ಸವಾಲುಗಳನ್ನು ಭೀಮ ಬಲದಿಂದ ಎದುರಿಸಿದೆ. ಪ್ರಾದೇಶಿಕ ಅಸಮತೋಲನವನ್ನು ಸಮತೋಲನಗೊಳಿಸುವ ಪ್ರಯತ್ನಗಳಲ್ಲಿ ತಕ್ಕಮಟ್ಟಿನ ಯಶ ದೊರೆತಿದೆ. ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣವಾಗಿ ಉತ್ತರ ಕರ್ನಾಟಕದ ಆಶೋತ್ತರಗಳ ಚರ್ಚೆಗೆ ವೇದಿಕೆ ಒದಗಿಸಿದೆ. ಕಲಬುರಗಿ ಮತ್ತು ಧಾರವಾಡಗಳಲ್ಲಿ ಹೈಕೋರ್ಟ್ ಪೀಠಗಳು ಕಾರ್ಯನಿರ್ವಹಿಸುತ್ತಿವೆ. ಕರಾವಳಿಯಲ್ಲಿ ಸಾಗರಮಾಲಾ ಕಾರ್ಯಕ್ರಮ ಬೃಹದಾಕಾರದ ರೂಪದಲ್ಲಿ ಅನುಷ್ಠಾನಗೊಂಡು ಅಭಿವೃದ್ಧಿಯ ಕೀರ್ತಿ ತಂದುಕೊಟ್ಟಿದೆ. ಬೆಂಗಳೂರು, ಮಂಗಳೂರು, ಧಾರವಾಡ ಮತ್ತು ಕಲಬುರಗಿಗಳು ಶಿಕ್ಷಣ ಕೇಂದ್ರಗಳಾಗಿ ಬೆಳೆದಿವೆ. ಎಲ್ಲಾ ವಲಯಗಳಲ್ಲಿ ವಿಶ್ವವಿದ್ಯಾಲಯಗಳು, ರಸ್ತೆ ಸಂಪರ್ಕ, ಮೂಲಭೂತ ಸೌಲಭ್ಯಗಳು ನಾಡಿನ ಅಭಿವೃದ್ಧಿಯ ದ್ಯೋತಕವಾಗಿವೆ. ಬೆಂಗಳೂರು ಸಿಲಿಕಾನ ಸಿಟಿ ಎಂದು ಖ್ಯಾತಿಹೊಂದಿ ಅತೀಹೆಚ್ಚು ಸಾಫ್ಟವೇರ ರಫ್ತು ಮಾಡುವ ನಗರಗವೆಂದು ದೇಶದಲ್ಲಿಯೇ ಮುಂಚೂಣಿಯಲ್ಲಿದೆ.
ರಾಜ್ಯ ಸರ್ಕಾರ ಕೆಲವೇ ದಿನಗಳಲ್ಲಿ ಚುನಾವಣೆಯಲ್ಲಿ ನೀಡಿದ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟು ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳು ಒಂದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬಡತನ ರೇಖೆಯಿಂದ ಮೇಲೆ ಬರುವಂತೆ ಮಾಡಿವೆ ಎಂದರು.
ತ್ವರಿತ ನ್ಯಾಯದಾನಕ್ಕಾಗಿ ನ್ಯಾಯಾಲಯಗಳಲ್ಲಿ ಆಧುನಿಕ ತಂತ್ರಜ್ಞಾನ ಉಪಯೋಗ, ಸೌಲಭ್ಯಗಳ ಸೃಷ್ಠಿಯಲ್ಲದೇ ಕಾನೂನಿನಲ್ಲಿ ಕೆಲವು ಬದಲಾವಣೆ ಮಾಡಲಾಗುತ್ತಿದೆ. ಶ್ರೀಘ್ರದಲ್ಲಿ ಕಾನೂನು ಸಚಿವಾಲಯದ ನೀತಿ ಪತ್ರವನ್ನು ಹೊರತರಲಾಗುತ್ತಿದೆ. ಭಾರತದ ಸಂವಿಧಾನದ ಆಶಯದಂತೆ ಉತ್ತಮ ಆಡಳಿತ ನೀಡಿ ನ್ಯಾಯದಾನವನ್ನು ಮನೆಬಾಗಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ದೃಡ ಹೆಜ್ಜೆ ಇಡಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸೌಲಭ್ಯಸೃಷ್ಠಿಸಿ ಬಡವರು, ಮಧ್ಯಮ ವರ್ಗದವರು ಶೈಕ್ಷಣಿಕ ಪ್ರವಾಸ, ಶ್ರಧ್ಧಾಕೇಂದ್ರಗಳಿಗೆ ಬೇಟಿ, ತೃಪ್ತಿಕರ ವಿಶ್ರಾಂತಿ ಪಡೆಯಲು ವಿನೂತನ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ರಾಜ್ಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸಿ ಇಂದಿನ ಪೀಳಿಗೆಗೆ ರಾಜ್ಯದ ಗತವೈಭವದ, ಇತಿಹಾಸದ ದರ್ಶನ ಮಾಡಿಸುವ ನಿಟ್ಟಿನಲ್ಲಿ ಪ್ರಾಚೀನ ಸ್ಮಾರಕಗಳನ್ನು ಗುರುತಿಸಿ ಅವುಗಳನ್ನು ಸಂರಕ್ಷಿಸಲು ಜನರ ಪಾಲ್ಗೋಳ್ಳುವಿಕೆಗಾಗಿ ಸ್ಮಾರಕ ದತ್ತು ಯೋಜನೆ ರೂಪಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ವೈಜ್ಞಾನಿಕ ಅಭಿವೃದ್ಧಿಗಾಗಿ ಈಗಾಗಲೇ ತಜ್ಞರಿಂದ ವರದಿ ಪಡೆಯಲಾಗಿದೆ. ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕ್ರಮ ಜರುಗಿಸಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ, ಕ್ರೀಡಾ ಕ್ಷೇತ್ರಗಳಲ್ಲಿ ಹಾಗೂ ಮೂಲಭೂತ ಸೌಲಭ್ಯ ವಲಯಗಳಲ್ಲಿ ಅಪಾರ ಸೌಲಭ್ಯಗಳ ಸೃಷ್ಠಿಯಾಗಿದೆ. ಜಿಮ್ಸ್‍ನಲ್ಲಿ 450 ಹಾಸಿಗೆಗಳ ಆಸ್ಪತ್ರೆ ಲೋಕಾರ್ಪಣೆಗೊಳ್ಳುತ್ತಿದೆ. ಹೃದಯ ರೋಗಿಗಳ ಚಿಕಿತ್ಸೆಗಾಗಿ ಕ್ಯಾತಲ್ಯಾಬ ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.