ಆರ್.ಟಿಇ ಶುಲ್ಕ ಮರುಪಾವತಿ, ತಾಲ್ಲೂಕುವಾರು ಮಾಹಿತಿ ನೀಡಿ : ಸಂಗಣ್ಣ ಕರಡಿ

ಆರ್.ಟಿಇ ಶುಲ್ಕ ಮರುಪಾವತಿ, ತಾಲ್ಲೂಕುವಾರು ಮಾಹಿತಿ ನೀಡಿ : ಸಂಗಣ್ಣ ಕರಡಿ

ಕೊಪ್ಪಳ, ಜು.28 : ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯಡಿ ಖಾಸಗಿ ಶಾಲೆಗಳಿಗೆ ಆರ್ಟಿಇ ಶುಲ್ಕ ಮರುಪಾವತಿ ಕುರಿತ ಮಾಹಿತಿಯನ್ನು ತಾಲ್ಲೂಕುವಾರು ವಿಂಗಡಿಸಿ, ಬಾಕಿ ಉಳಿದ ಶಾಲೆಗಳ ಪಟ್ಟಿಯನ್ನು ಕಾರಣ ಸಹಿತ ವರದಿ ಸಲ್ಲಿಸಿ ಎಂದು ಸಂಸದ ಸಂಗಣ್ಣ ಕರಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಗ್ರ ಶಿಕ್ಷಣ ಕರ್ನಾಟಕ/ಮಧ್ಯಾಹ್ನ ಬಿಸಿಯೂಟ/ಸಾಕ್ಷರ ಭಾರತ ಯೋಜನೆಗಳ 2019-20 ನೇ ಸಾಲಿನ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಗ್ರ ಶಿಕ್ಷಣ ಅಭಿಯಾನದಡಿ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಆರ್ಟಿಇ ಶುಲ್ಕ ಮರುಪಾವತಿ ಕುರಿತು ಇಲಾಖೆ ನೀಡಿರುವ ಮಾಹಿತಿಯಲ್ಲಿ ಸಮರ್ಪಕ ವಿವರಣೆಗಳಿಲ್ಲ. ಜಿಲ್ಲೆಯಲ್ಲಿ ಒಟ್ಟು 276 ಖಾಸಗಿ ಶಾಲೆಗಳಿಗೆ ಆರ್ಟಿಇ ಶುಲ್ಕ ಮರುಪಾವತಿ ಮಾಡಲಾಗುತ್ತದೆ. ಅವುಗಳಲ್ಲಿ ಯಾವ ಶಾಲೆಗೆ ಪೂರ್ಣ ಮರುಪಾವತಿ ಮಾಡಲಾಗಿದೆ, ಬಾಕಿ ಉಳಿದ ಶಾಲೆಗಳೆಷ್ಟು ಎಂಬ ಕುರಿತು ಶಾಲಾವಾರು ಹಾಗೂ ತಾಲ್ಲೂಕುವಾರು ಮಾಹಿತಿಯ ವರದಿಯನ್ನು ಸಲ್ಲಿಸಿ. ಕೆಕೆಆರ್ಡಿಬಿ ಇಂದ ಶಾಲಾ ಕಟ್ಟಡಗಳ ನಿರ್ಮಾಣ, ದುರಸ್ಥಿಗೆ ಅನುದಾನ ಬಿಡುಗಡೆಗೊಂಡಿದ್ದರೂ ಇದುವರೆಗೆ 2017-18 ನೇ ಸಾಲಿನ ಕಾಮಗಾರಿಗಳನ್ನು ಪುರ್ಣಗೊಳಿಸಿಲ್ಲ. ಬಹುತೇಕ ಶಾಲಾ ಮುಖ್ಯೋಪಾಧ್ಯಾಯರಿಗೆ ತಮ್ಮ ಶಾಲೆಯಲ್ಲಿ ಕಾಮಗಾರಿ ನಡೆಸುತ್ತಿರುವ ಏಜೆನ್ಸಿ ಕುರಿತು ಮಾಹಿತಿಯೇ ತಿಳಿದಿಲ್ಲ. ಚುನಾಯಿತ ಪ್ರತಿನಿಧಿಗಳು ಕಾಮಗಾರಿ ಪರಿಶೀಲನೆಗೆ ತೆರಳಿದಾಗ ಶಾಲಾ ಮುಖ್ಯೋಪಾಧ್ಯಾಯರಿಂದ ಸಮರ್ಪಕ ಮಾಹಿತಿ ದೊರೆಯುವುದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರಿಗೆ ಈ ಕುರಿತು ಪತ್ರ ಬರೆದು ಜನಪ್ರತಿನಿಧಿಗಳು ಶಾಲೆಗೆ ಭೇಟಿ ನೀಡಿದಾಗ ಸೂಕ್ತ ಮಾಹಿತಿ ನೀಡುವಂತೆ ಸೂಚನೆ ನೀಡಿ ಹಾಗೂ ವರ್ಷಗಳ ಹಿಂದಿನ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿರದ ಬಗ್ಗೆ ಸೂಕ್ತ ಕಾರಣಗಳೊಂದಿಗೆ ವಾರದೊಳಗೆ ವರದಿ ನೀಡಿ. ಶಿಕ್ಷಣ ತಜ್ಞರ ವರದಿ ಆಧಾರದಲ್ಲಿ ಶಾಲೆಗಳ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಮಾರ್ಗಸೂಚಿಯನುಸಾರ ಉನ್ನತೀಕರಿಸಿದ ಶಾಲೆಗಳಿಗೆ, ಅಗತ್ಯ ವಿದ್ಯಾರ್ಹತೆ ಮತ್ತು ಅನುಭವವಿರುವ ಶಿಕ್ಷಕರನ್ನು ನೇಮಕ ಮಾಡಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂದು ಅವರು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.