ಐಸಿಸಿ ಸಭೆಯ ನಿರ್ಣಯದಂತೆ ನೀರು : ರಮೇಶ ಜಾರಕಿಹೊಳಿ

ಐಸಿಸಿ ಸಭೆಯ ನಿರ್ಣಯದಂತೆ ನೀರು : ರಮೇಶ ಜಾರಕಿಹೊಳಿ

ಕೊಪ್ಪಳ : ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ಮತ್ತು ಬಲ ತಂಡೆ ಕಾಲುವೆಗಳ ವ್ಯಾಪ್ತಿಯ ರೈತರ ಎರಡನೇ ಬೆಳೆಗೆ 113ನೇ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ನೀರು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಹೇಳಿದರು. ಅವರು ಇಂದು (ಮಾ.14) ಮುನಿರಾಬಾದ್ ಕಾಡಾ ಕಚೇರಿಯಲ್ಲಿ ಟಿಬಿ ಡ್ಯಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ರಾಜ್ಯ ಮಟ್ಟದ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ತುಂಗಭದ್ರಾ ಡ್ಯಾಂನ ಅಭಿವೃದ್ಧಿಗಾಗಿ ಅಂತರ್‌ರಾಜ್ಯ ವ್ಯಾಪ್ತಿಯ ವಿಷಯಗಳ ಬಗ್ಗೆಯೂ ಇಂದು ಸಭೆಯಲ್ಲಿ ಚರ್ಚಿಸಲಾಗಿದ್ದು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಎಡದಂತಡ ಕಾಲುವೆ ಸ್ಥಿತಿ-ಗತಿ ಬಗ್ಗೆ ವರದಿ ಸಲ್ಲಿಸುವಂತೆ ಸಿಇಒ ಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ನಮ್ಮ ಸರ್ಕಾರವು ರೈತ ಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸದ್ಯ ಏತ ನೀರಾವರಿ ಯೋಜನೆಯಡಿ ಸುಮಾರು 5000 ಕೋಟಿ ರೂ.ಗಳ ಅನುದಾನವನ್ನು ನಮ್ಮ ಸರ್ಕಾರವು ನೀಡಿದೆ. ಇನ್ನೂ ಹೆಚ್ಚಿನ ಅನುದಾನವನ್ನು ನೀರಾವರಿಗೆ ನೀಡಲಿದೆ ಎಂದರು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಮೂರು ಜಿಲ್ಲೆಗಳ ಜನ ಜನುವಾರುಗಳಿಗೆ ತುಂಗಭದ್ರಾ ಜಲಾಶಯದ ನೀರನ್ನು ಒದಗಿಸಲಾಗುವುದು. ಜಲಾಶಯದಲ್ಲಿ ಇದ್ದ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎರಡನೇ ಬೆಳೆಗೆ ಎಷ್ಟು ಪ್ರದೇಶಗಳಿಗೆ ನೀರನ್ನು ಕೊಡುವುದಕ್ಕೆ ಸಾಧ್ಯ ಇದೆ, ಎಂಬುದರ ಬಗ್ಗೆ ಚರ್ಚಿಸಿ, ಎರಡನೇ ಬೆಳೆಗೆ ಸಹ ನೀರನ್ನು ಬಿಡಲು ಅನುಕೂಲ ಮಾಡಿಕೊಡಲಾಗುವುದು. ನಮ್ಮ ಉದ್ದೇಶ ಈ ಭಾಗದಲ್ಲಿರುವ ತುಂಗಾಭದ್ರ ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೇ ರೀತಿ ತೊಂದರೆಯಾಗಬಾರದು, ಮತ್ತು ನೀರು ಪೋಲಾಗಬಾರದು ಎಂಬುವುದಾಗಿದೆ ಎಂದರು.