ಬಿಎಸ್ ವೈ ನಾಯಕತ್ವ ಕೊಂಡಾಡಿದ ಡಿಸಿಎಂ

ಬಿಎಸ್ ವೈ ನಾಯಕತ್ವ ಕೊಂಡಾಡಿದ ಡಿಸಿಎಂ

ರಾಮನಗರ, ಜು.27 : ರಾಜ್ಯವು ರಾಜಕೀಯ ಶೂನ್ಯತೆ ಮತ್ತು ನಾಯಕತ್ವದ ಕೊರತೆ ಎದುರಿಸುತ್ತಿದ್ದ ಸಂಕಷ್ಟ ಕಾಲದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಕಠಿಣ ಸವಾಲುಗಳ ನಡುವೆಯೂ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿದ ಪ್ರಬಲ ನಾಯಕ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಕೊಂಡಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ರಾಜ್ಯಮಟ್ಟದ ಸರಳ ವರ್ಚುಯಲ್ ಫ್ಲಾಟ್’ಫಾರಂ ಸಮಾರಂಭದಲ್ಲಿ ರಾಮನಗರದಿಂದಲೇ ಮಾತನಾಡಿದ ಅವರು, 50 ವರ್ಷಗಳಿಗೂ ಹೆಚ್ಚಿನ ರಾಜಕೀಯ ಅನುಭವ ಹಾಗೂ ಜನಪರ ಕೆಲಸ ಮಾಡಿರುವ ಯಡಿಯೂರಪ್ಪ ಅವರು, ನಮಗೆಲ್ಲರಿಗೂ ಸಮರ್ಪಕ ಮಾರ್ಗದರ್ಶನ ನೀಡುವ ಮೂಲಕ ರಾಜ್ಯಕ್ಕೆ ಅತ್ಯುತ್ತಮವಾದ ಸ್ಥಿರ ಸರಕಾರ ನೀಡಿದ್ದಾರೆ. ಇದಕ್ಕಾಗಿ ನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ನುಡಿದರು. 2018ರಲ್ಲಿ ಯಾರಿಗೂ ಬಹಮತ ಸಿಗದಿದ್ದಾಗ ರಾಜ್ಯದಲ್ಲಿ ಒಂದು ರೀತಿಯ ರಾಜಕೀಯ ಶೂನ್ಯತೆ, ಅಭಿವೃದ್ಧಿಹೀನ ವಾತಾವರಣ ಉಂಟಾಗಿತ್ತು. ಬಳಿಕ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಉತ್ತರ ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದ ಮಹಾ ಪ್ರವಾಹ ಉಂಟಾಯಿತು. ಇದೆಲ್ಲವನ್ನು ಸಮರ್ಥವಾಗಿ ಎದುರಿಸಿ ಮುಖ್ಯಮಂತ್ರಿಗಳು, ಬಳಿಕ ಎದುರಾದ ಉಪ ಚುನಾವಣೆಯನ್ನು ಅಷ್ಟೇ ಸಮರ್ಥವಾಗಿ ಎದುರಿಸಿದರು. ಅದರ ಪ್ರತಿಫಲವಾಗಿ 15 ಕ್ಷೇತ್ರಗಳ ಪೈಕಿ 12 ಕಡೆ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದರು. ಜನರು ಸ್ಥಿರ ಸರಕಾರವನ್ನು ಅಪೇಕ್ಷಿಸಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಅದರಂತೆ ಯಡಿಯೂರಪ್ಪ ಅವರು ಸ್ಥಿರ ಮತ್ತು ಅಭಿವೃದ್ಧಿಪರ ಸರಕಾರವನ್ನು ನೀಡಿದ್ದಾರೆಂದು ಡಿಸಿಎಂ ಒತ್ತಿ ಹೇಳಿದರು.