ಕೊರೊನಾ ಹರುಡುವಿಕೆ ನಿಯಂತ್ರಣ ಕ್ರಮಗಳಿಗೆ ಸಾರ್ವಜನಿಕರು ಸಹಕರಿಸಬೇಕು : ಪಿ.ಸುನೀಲ್ ಕುಮಾರ್

ಕೊರೊನಾ ಹರುಡುವಿಕೆ ನಿಯಂತ್ರಣ ಕ್ರಮಗಳಿಗೆ ಸಾರ್ವಜನಿಕರು ಸಹಕರಿಸಬೇಕು : ಪಿ.ಸುನೀಲ್ ಕುಮಾರ್

ಕೊಪ್ಪಳ : ಕೊರೊನಾ (ಕೋವಿಡ್-19) ವೈರಾಣು ಹರಡುವ ಭೀತಿ ಹಿನ್ನೆಲೆಯಲ್ಲಿ ಮತ್ತೆ 21 ದಿನಗಳ ಕಾಲದವರೆಗೆ ಅಂದರೆ ಏ.14 ರವರೆಗೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅವಶ್ಯಕ ಸಾಮಗ್ರಿಗಳಾದ ಹಾಲು, ತರಕಾರಿ, ಹಣ್ಣು, ದಿನಸಿ, ಪದಾರ್ಥಗಳನ್ನು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅವಶ್ಯಕ ಸಾಮಾಗ್ರಿಗಳ ಮಾರಾಟಗಾರರಿಂದ ಮನೆ ಮನೆಗೆ ತಲುಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಈ ಕುರಿತು ವಾರ್ಡ್ ವಾರು, ಪ್ರದೇಶವಾರು ಮಾರಾಟ ಮಾಡುವ ಮಾರಾಟಗಾರರ ವಿವರಗಳನ್ನು ಆಯಾ ನಗರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳು ಅಥವಾ ಪೌರಾಯುಕ್ತರು, ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು. ಗ್ರಾಮೀಣ ಭಾಗದಲ್ಲಿ ತಹಶೀಲ್ದಾರ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯತ್ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಮನೆ ಮನೆಗೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಗಳೇ ತಲುಪಿಸುವಂತೆ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಮನೆ ಮನೆಗೆ ದಾಸ್ತಾನುಗಳನ್ನು ವಿತರಣೆ ಮಾಡುವ ಸಂದರ್ಭಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಗುಂಪು ಗುಂಪಾಗಿ ಒಂದು ಪ್ರದೇಶದಲ್ಲಿ ಬಂದು ಖರೀದಿಸಲು ಅವಕಾಶ ನೀಡುವಂತಿಲ್ಲ್ಲ. ಸಾಮಾಜಿಕ ಅಂತರವನ್ನು ಕಾಪಾಡಿ ಮನೆಮನೆಗೆ ಸಾಮಗ್ರಿಗಳನ್ನು ತಲುಪಿಸಬೇಕು. ಮಾರಾಟಗಾರರಿಗೆ ಸಾರ್ವಜನಿಕರು ಸಾಧ್ಯವಾದಷ್ಟು ಗೂಗಲ್ ಪೇ, ಪೇಟಿಎಂ, ಫೋನ್ ಪೇ ಹಾಗೂ ಇತರೆ ವಿದ್ಯುನ್ಮಾನ ವ್ಯವಸ್ಥೆಯಲ್ಲಿ ಹಣ ಪಾವತಿಸಬೇಕು. ಮಾರಾಟಗಾರರು ವಿದ್ಯುನ್ಮಾನ ಪರಿಕರಗಳನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ಯೋಗ್ಯ ಬೆಲೆಯಲ್ಲಿ ಮಾರಾಟ ಮಾಡಬೇಕು. ಯಾವುದೇ ಅಗತ್ಯ ಹಾಗೂ ಅವಶ್ಯಕ ಸಾಮಗ್ರಿಗಳನ್ನು ಸಾಗಾಣಿಕೆ ಮಾಡುವ ವಾಹನಗಳನ್ನು ನಿರ್ಬಂದಿಸಬಾರದು. ಪೊಲೀಸ್ ಇಲಾಖೆಯವರು ಹಾಗೂ ಸಾರಿಗೆ ಇಲಾಖೆಯವರು ಸಮನ್ವಯವನ್ನು ಸಾಧಿಸಿಕೊಂಡು ಸರಕು ಸಾಗಾಣಿಕೆ ವಾಹನಗಳ ಸಾಗಾಟಕ್ಕೆ ಸಹಕರಿಸಬೇಕು. ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಂಸ್ಥೆಗಳ ವಸತಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿಗಳು ಹಾಲಿ ತಂಗಿರುವ ಆಯಾ ಜಿಲ್ಲೆಗಳ ಮತ್ತು ಆಯಾ ಪ್ರದೇಶಗಳ ವ್ಯಾಪ್ತಿಯಲ್ಲಿಯೇ ಏಪ್ರಿಲ್ 14 ರ ವರೆಗೆ ಇರಬೇಕು. ಅವರುಗಳ ಜವಾಬ್ದಾರಿಯನ್ನು ಆಯಾ ಸಂಸ್ಥೆಗಳ ಮುಖ್ಯಸ್ಥರುಗಳೇ ವಹಿಸಿಕೊಳ್ಳಬೇಕು. ಈ ಬಗ್ಗೆ ಒಂದು ವೇಳೆ ಆಯಾ ಜಿಲ್ಲಾ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಬಂದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ವ್ಯವಹಾರಕ್ಕಾಗಿ ಅಗತ್ಯವಿರುವ ಹಣದ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಆಯಾ ವ್ಯಾಪ್ತಿಗಳ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಮೈಕ್ರೋ ಎ.ಟಿ.ಎಂ. ಸಾಧನಗಳ ಮುಖಾಂತರ ಸಾಧ್ಯವಾದಷ್ಟು ಎಲ್ಲಾ ಪ್ರದೇಶಗಳಲ್ಲಿ ಸೌಲಭ್ಯವನ್ನು ಮನೆ ಮನೆಗೆ ತೆರಳಿ ಕಲ್ಪಿಸಬೇಕು. ಅಗತ್ಯ ಮತ್ತು ಅವಶ್ಯಕ ಸಾಮಗ್ರಿಗಳ ಸರಕು ಸಾಗಾಣಿಕೆ ಸಂಬಂಧ ಹಮಾಲಿ ಕಾರ್ಮಿಕರು ಮತ್ತು ಸರ್ಕಾರಿ ಗೋದಾಮುಗಳಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ರೈಲುಗಳ ಮುಖಾಂತರ ಬರುವ ಅಗತ್ಯ ವಸ್ತುಗಳ ಸಾಗಾಣಿಕೆ ಮಾಡುವ ಸಲುವಾಗಿ ಅನುಮತಿ ನೀಡಲಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ರೈಲ್ವೆ ಇಲಾಖೆಯವರು ಮತ್ತು ಸಂಬಂಧಪಟ್ಟ ಇಲಾಖೆಯವರು ಕ್ರಮವಹಿಸಬೇಕು. ಈ ಅಂಶಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇಂತಹ ತುರ್ತು ಪರಿಸ್ಥಿತಿಯನ್ನು ಸ್ವಹಿತಾಸಕ್ತಿ ಹಾಗೂ ವೈಯಕ್ತಿಕ ಭಾವನೆಗಳ ಆಧಾರದಲ್ಲಿ ಅವಕಾಶ ಬಳಸಿಕೊಂಡು ವೃಥಾ ತೊಂದರೆ ಕೊಡಬಾರದು. ಹಾಗೂ ಅಂತಹ ದೂರುಗಳು ಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.