ಚಿಕ್ಕಮಗಳೂರು ಹಬ್ಬ : ವಿಶೇಷ ಚೇತನರ ಕ್ರೀಡಾಕೂಟ

ಚಿಕ್ಕಮಗಳೂರು ಹಬ್ಬ : ವಿಶೇಷ ಚೇತನರ ಕ್ರೀಡಾಕೂಟ

ಚಿಕ್ಕಮಗಳೂರು : ಚಿಕ್ಕಮಗಳೂರು ಹಬ್ಬದ ಅಂಗವಾಗಿ ವಿವಿಧ ವಯೋಮಾನದ ಮಕ್ಕಳಿಗೆ ಕ್ರೀಡಾಕೂಟವನ್ನು ಏರ್ಪಡಿಸಿದಂತೆ ವಿಶೇಷಚೇತನರಿಗೆ ಕ್ರೀಡಾಕೂಟವನ್ನು ಏರ್ಪಡಿಸಿರುವುದು ಚಿಕ್ಕಮಗಳೂರು ಹಬ್ಬದ ವಿಶೇಷತೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು. ಅವರು ಇಂದು ನಗರದ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ವಿಶೇಷಚೇತನರಿಗೆ ನಡೆದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಚಿಕ್ಕಮಗಳೂರು ಹಬ್ಬದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಎಲ್ಲರಂತೆ ವಿಶೇಷಚೇತನರು ಭಾಗವಹಿಸಬೇಕೆಂಬ ಉದ್ದೇಶದಿಂದ ವಿಶೇಷಚೇತನರಿಗಾಗಿ ಸಂಗೀತ ಕುರ್ಚಿ, ಪಾಸಿಂಗ್ ದ ಬಾಲ್, ಪ್ರತಿಮೆಗೆ ಹಾರ ಹಾಕುವುದು ಸೇರಿದಂತೆ ಮತ್ತಿತರ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ ಮಾತನಾಡಿ, ಚಿಕ್ಕಮಗಳೂರು ಹಬ್ಬದ ಅಂಗವಾಗಿ ನಡೆಯುತ್ತಿರುವ ಎಲ್ಲಾ ಕಾರ್ಯಕ್ರಮಗಳು ಮತ್ತು ಕ್ರೀಡೆಗಳಲ್ಲಿ ವಿಶೇಷಚೇತರಿಗಾಗಿ ನಡೆಯುತ್ತಿರುವ ಕ್ರೀಡಾಕೂಟ ವಿಶೇಷವಾಗಿದ್ದು, ಸ್ಪರ್ಧಾ ಮನೋಭಾವದಿಂದ ಎಲ್ಲರೂ ಭಾಗವಹಿಸಬೇಕು. ಕ್ರೀಡೆ ಎಂದ ಮೇಲೆ ಸೋಲು ಗೆಲುವುಗಳು ಸಾಮಾನ್ಯವಾಗಿದ್ದು, ಸೋಲು ಗೆಲುವುಗಳ ಬಗ್ಗೆ ಬಗ್ಗೆ ಯೋಚನೆ ಮಾಡದೇ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಕ್ರೀಡಾಳುಗಳಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಹೆಚ್.ಪಿ. ಮಂಜುಳಾ ಡಿಡಿಪಿಐ ಪಿ.ನಂಜಯ್ಯ, ದೈಹಿಕ ಶಿಕ್ಷಣಾಧಿಕಾರಿ ರವಿಕುಮಾರ್, ವಿಕಲಚೇತನರ ಕಲ್ಯಾಧಿಕಾರಿ ವೀರಭದ್ರಪ್ಪ ಸೇರಿದಂತೆ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು