ಅ.15 ರಂದು ಸಾಮಾಜಿಕ ಅಂತರದೊಂದಿಗೆ ಸ್ವಾತಂತ್ರ್ಯೋತ್ಸವ : ಕೋವಿಡ್ ವಾರಿಯರ್ ಗಳಿಗೆ  ಸನ್ಮಾನ

ಅ.15 ರಂದು ಸಾಮಾಜಿಕ ಅಂತರದೊಂದಿಗೆ ಸ್ವಾತಂತ್ರ್ಯೋತ್ಸವ : ಕೋವಿಡ್ ವಾರಿಯರ್ ಗಳಿಗೆ ಸನ್ಮಾನ

ಧಾರವಾಡ, ಜು.31 : ಬರುವ ಅಗಸ್ಟ್ 15 ರಂದು ನಡೆಯುವ 74ನೇ ಸ್ವಾತಂತ್ರ್ಯೋತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಜರ್, ಮಾಸ್ಕುಗಳ ಬಳಕೆ ನಿಯಮದೊಂದಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕಳೆದ ನಾಲ್ಕು ತಿಂಗಳುಗಳಿಂದ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ವೈದ್ಯರು, ನರ್ಸ್, ಸಹಾಯಕ ಸಿಬ್ಬಂದಿ, ಪೌರಕಾರ್ಮಿಕರು ಮೊದಲಾದ ವಾರಿಯರ್ಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ಪ್ರಸಕ್ತ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಕುರಿತು ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ಕೆಲವು ಮಾರ್ಗದರ್ಶನಗಳನ್ನು ನೀಡಿದೆ. ಈ ಮಾರ್ಗದರ್ಶನದ ಪ್ರಕಾರ ಜಿಲ್ಲಾ ಮಟ್ಟದಲ್ಲಿ ಪರೇಡ್, ರಾಷ್ಟ್ರ ಧ್ವಜಾರೋಹಣ, ಜಿಲ್ಲಾ ಉಸ್ತುವಾರಿ ಸಚಿವರಿಂದ ಭಾಷಣ ಮತ್ತಿತರ ವಿಧಾಯಕ ಕಾರ್ಯಕ್ರಮಗಳ ಮೂಲಕ ರಾಷ್ಟ್ರಕ್ಕೆ ಗೌರವವನ್ನು ಸಲ್ಲಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾದ ಹಿನ್ನೆಲೆಯಲ್ಲಿ ಈ ಬಾರಿ ಶಾಲಾ-ಕಾಲೇಜು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಆಯ್ದ ಪ್ರತಿಭಾವಂತ ವಿದ್ಯಾರ್ಧಿಗಳು ಹಾಗೂ ಆರೋಗ್ಯ ಇಲಾಖೆ, ಕಿಮ್ಸ್ ವೈದ್ಯರು, ನರ್ಸಗಳು, ಪೌರಕಾರ್ಮಿಕರು, ಸಹಾಯಕ ಸಿಬ್ಬಂದಿ ಮತ್ತಿತರ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಕೋವಿಡ್ ವಾರಿಯರ್ಗಳನ್ನು ಸಾಂಕೇತಿಕವಾಗಿ ಸನ್ಮಾನಿಸಿ ಗೌರವಿಸಲಾಗುವುದು. ಎಲ್ಲ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಬೆಳಿಗ್ಗೆ 7:30ಕ್ಕೆ ಧ್ವಜಾರೋಹಣ ನೆರವೇರಿಸಿ 8.30 ಕ್ಕೆ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಸಮಾವೇಶಗೊಳ್ಳಬೇಕು. 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ. ಪೊಲೀಸ್, ಗೃಹ ರಕ್ಷಕದಳ, ಅರಣ್ಯ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾತ್ರ ಪಥಸಂಚಲನ ನಡೆಯಲಿದೆ. ಶಾಲಾ-ಕಾಲೇಜುಗಳು ರಜೆ ಇರುವುದರಿಂದ ಈ ಬಾರಿ ವಿದ್ಯಾರ್ಥಿಗಳ ತಂಡದ ಪಥಸಂಚಲನ ಬೇಡ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಭಾಷಣಕ್ಕೆ ಮಾಹಿತಿ ನೀಡಲು ಸೂಚನೆ : 2020 ರ ಆಗಸ್ಟ್ 15 ರಂದು ನಡೆಯುವ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಷಣಕ್ಕೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳಿಗೆ ಸಂಬಂಧಿಸಿದ, ಇದುವರೆಗೆ ಸಾಧಿಸಿದ ಗುರಿ, ಸಾಧನೆ ಕುರಿತು ಸಂಕ್ಷಿಪ್ತವಾಗಿ (ಒಂದು ಪ್ಯಾರಾಗ್ರಾಫ್ನಲ್ಲಿ) ಮಾಹಿತಿಯನ್ನು ನುಡಿ-01 ತಂತ್ರಾಂಶದಲ್ಲಿ ಸಿದ್ಧಪಡಿಸಿ ಎಂಎಸ್ ವರ್ಡ್ ಸಾಫ್ಟ್ ಕಾಪಿಯೊಂದಿಗೆ ಆಗಸ್ಟ್ 07 ರ ಸಂಜೆ 5 ಗಂಟೆಯೊಳಗೆ ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಧಾರವಾಡ ಇವರಿಗೆ (ಸಾಫ್ಟ್ಕಾಪಿ ಮತ್ತು ಹಾರ್ಡ್ಕಾಪಿ) ಕಳುಹಿಸಬೇಕು. ಇ-ಮೇಲ್ ವಿಳಾಸ varthabhavandwd74@gmail.com ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9480654365 ಕಛೇರಿ ದೂರವಾಣಿ ಸಂಖ್ಯೆ :0836-2447469 ಗೆ ಸಂಪರ್ಕಿಸಲು ಸೂಚಿಸಿದೆ. ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಉಪಪೊಲೀಸ್ ಆಯುಕ್ತ ಆರ್.ಬಿ.ಬಸರಗಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.