ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾನ ನಿಷೇಧ : ವಿಕಾಸ್ ಕಿಶೋರ್ ಸುರಳ್ಕರ್

ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾನ ನಿಷೇಧ : ವಿಕಾಸ್ ಕಿಶೋರ್ ಸುರಳ್ಕರ್

ಕೊಪ್ಪಳ, ಆ.12 : ಕೊರೊನಾ ಸೋಂಕು ಹರಡುವಿಕೆ ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿಯ ಗೌರಿ-ಗಣೇಶ ಹಬ್ಬದಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಗಣೇಶ ಪ್ರತಿಷ್ಠಾನವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಗೌರಿ-ಗಣೇಶ ಹಾಗೂ ಮೊಹರಂ ಹಬ್ಬದ ಕುರಿತು ನಡೆದ ಶಾಂತಿ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೌರಿ-ಗಣೇಶ ಹಾಗೂ ಮೊಹರಂ ನಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ಸೋಂಕು ಹರಡುವಿಕೆ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಕಡ್ಡಾಯ ಮಾಸ್ಕ್ ಧಾರಣೆಯಂತಹ ಸೂಚನೆಗಳನ್ನು ನೀಡಿದರೂ ಹೆಚ್ಚಿನ ಜನರು ಭಾಗವಹಿಸುವುದರಿಂದ ನೂಕು ನುಗ್ಗಲು ಉಂಟಾಗುವ ಸಂಭವವಿರುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಹಾಗೂ ಮೊಹರಂ ಹಬ್ಬಗಳನ್ನು ನಿ಼ಷೇಧಿಸಲಾಗಿದ್ದು, ಸಾರ್ವಜನಿಕರು ವೈಯಕ್ತಿಕವಾಗಿ ಹೆಚ್ಚು ಜನರು ಸೇರದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ತಮ್ಮ ಮನೆಗಳಲ್ಲಿಯೇ ಗಣೇಶ ಪ್ರತಿಷ್ಠಾಪನೆ ಹಾಗೂ ಮೊಹರಂ ಹಬ್ಬವನ್ನು ಆಚರಣೆ ಮಾಡಬಹುದು. ಜಿಲ್ಲೆಯ ಎಲ್ಲಾ ಸಾರ್ವಜನಿಕ ಗಣೇಶ ಪ್ರತಿಷ್ಠಾನ ಮಂಡಳಿಯವರು ಜಿಲ್ಲಾಡಳಿತದ ಆದೇಶವನ್ನು ಪಾಲಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಅವರು ಗಣೇಶ ಮಂಡಳಿಯವರಲ್ಲಿ ಮನವಿ ಮಾಡಿದರು. ಜಿಲ್ಲೆಯಲ್ಲಿ ಗಣೇಶ ಮೂರ್ತಿ ತಯಾರಕರು ಕಡ್ಡಾಯವಾಗಿ ಮಣ್ಣಿನ ಮೂರ್ತಿಗಳನ್ನು ತಯಾರಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ಮೂರ್ತಿಗಳು ಕಂಡುಬಂದರೆ ಅವುಗಳನ್ನು ಜಪ್ತಿ ಮಾಡಿ ತಯಾರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮೂರ್ತಿ ತಯಾರಕರಿಗೆ ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಮಾತನಾಡಿ, ಕೋವಿಡ್-19 ಕಾರಣದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾನಕ್ಕೆ ನಿರ್ಬಂಧ ಹೇರಿದ್ದು, ನಮ್ಮ ಜಿಲ್ಲೆಯಲ್ಲಿಯೂ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯನ್ನು ನಿಷೇಧಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಹಾಗೂ ಮೊಹರಂ ಅನ್ನು ಜಿಲ್ಲಾಡಳಿತದ ನಿರ್ದೇಶನದಂತೆ ವೈಯಕ್ತಿಕವಾಗಿ ಆಚರಿಸಬೇಕು ಎಂದು ಹೇಳಿದರು.