ಫಲಾನುಭವಿಗಳು ಸರ್ಕಾರದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಿ : ರಘುನಂದನ್ ಮೂರ್ತಿ

ಫಲಾನುಭವಿಗಳು ಸರ್ಕಾರದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಿ : ರಘುನಂದನ್ ಮೂರ್ತಿ

ಕೊಪ್ಪಳ, ಸೆ.18 : ಸರ್ಕಾರದ ವತಿಯಿಂದ ನೀಡುತ್ತಿರುವ ಉಚಿತ ಯಂತ್ರಚಾಲಿತ ತ್ರಿಚಕ್ರ ವಾಹನದ ಸೌಲಭ್ಯವನ್ನು ವಿಕಲಚೇತನರು ಸದ್ಬಳಕೆ ಮಾಡಿಕೊಂಡು, ಸ್ವಾವಲಂಬಿಯಾಗಬೇಕು ಎಂದು ಜಿಲ್ಲಾ ಪಂಚಾಯತಿ ಸಿ.ಇ.ಓ ರಘುನಂದನ್ ಮೂರ್ತಿ ಅವರು ಹೇಳಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ಇಲಾಖೆಯಡಿ ಮಂಜೂರಾಗಿರುವ ವಿಕಲಚೇತನರ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಾಹನಗಳನ್ನು ವಿತರಿಸಿ ಅವರು ಮಾತನಾಡಿದರು. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಡಿ.ಎನ್.ಮೂಲಿಮನಿ ಮಾತನಾಡಿ, 2019-20ನೇ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ವತಿಯಿಂದ ಉಚಿತ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಎಸ್.ಸಿ, ಎಸ್.ಟಿ ಮತ್ತು ಸಾಮಾನ್ಯ ವರ್ಗ ಸೇರಿದಂತೆ ಒಟ್ಟು 208 ಅರ್ಜಿಗಳು ಸ್ವೀಕೃತವಾಗಿದ್ದವು. ಅವುಗಳನ್ನು ಪರಿಶೀಲಿಸಿದಾಗ 127 ಅರ್ಜಿಗಳು ಸಕ್ರಿಯವಾಗಿದ್ದವು. ನಂತರ ಜಿಲ್ಲಾ ಪಂಚಾಯತ್ ಸಿ.ಇ.ಓ ಅವರ ನೇತೃತ್ವದ ಜಿಲ್ಲಾ ಕಮಿಟಿಯಲ್ಲಿ ಸಕ್ರಿಯವಾಗಿದ್ದ ಅರ್ಜಿದಾರರಿಗೆ ಸಂದರ್ಶನ ಆಯೋಜಿಸಿದಾಗ ಅದರಲ್ಲಿ ಒಟ್ಟು 40 ಜನ ಫಲಾನುಭವಿಗಳು ಆಯ್ಕೆಯಾದರು. ಅದರಲ್ಲಿ 20 ರಂತೆ 2 ಫಲಾನುಭವಿಗಳ ಪಟ್ಟಿಯನ್ನು ರಚಿಸಲಾಯಿತು. ಕೋವಿಡ್-19 ಹಿನ್ನೆಲೆಯಲ್ಲಿ ಅನುದಾನದ ಕೊರತೆಯಿಂದ ಮೊದಲ ಪಟ್ಟಿಯಲ್ಲಿರುವ ಎಸ್.ಸಿ-07, ಎಸ್.ಟಿ-02 ಮತ್ತು ಸಾಮಾನ್ಯ ವರ್ಗದ 11 ಫಲಾನುಭವಿಗಳಿಗೆ ಉಚಿತ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಎರಡನೇ ಪಟ್ಟಿಯ ಫಲಾನುಭವಿಗಳಿಗೆ ವಾಹನಗಳನ್ನು ವಿತರಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಶರಣಬಸವ, ಜಿಲ್ಲಾ ವಿಕಲಚೇತನರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ, ಎಂ.ಆರ್.ಡಬ್ಲೂ ಹಾಗೂ ವಿ.ಆರ್.ಡಬ್ಲೂ ಕಾರ್ಯಕರ್ತರು ಉಪಸ್ಥಿತರಿದ್ದರು.